ದೇವನಹಳ್ಳಿ: ರಸ್ತೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆ ದಿದೆ. ಸರ್ಕಾರದಿಂದ ಮಂಜೂರಾಗಿದ್ದ ಇನಾಂತಿ ಜಮೀನಿನಲ್ಲಿ ಓಡಾಡಲು ರಸ್ತೆ ಬಿಡುವಂತೆ ಒತ್ತಾಯಿಸಿ ಮತ್ತು ರಸ್ತೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋದ ಕಾರಹಳ್ಳಿ ಗ್ರಾಮದ ಸರ್ವೆ ನಂಬರ್ 56/1ರ ಸ್ವತ್ತಿನ ಸಿ.ಕೃಷ್ಣಪ್ಪ ಇಂಜಕ್ಷನ್ ಆದೇಶ ತಂದು ರಸ್ತೆ ಮಾಡಲು ಹೋದ ಸಂದರ್ಭದಲ್ಲಿ ಎರಡೂ ಸರ್ವೆ ನಂಬರ್‌ಗಳ ಖಾತೆದಾರರ ನಡುವೆ ಜಗಳ ಶುರುವಾಗಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಸರ್ವೆ ನಂ.56/1ರಲ್ಲಿ 1 ಎಕರೆ 31 ಗುಂಟೆ ಜಮೀನಿನಲ್ಲಿ ಓಡಾಡಲು ದಾರಿ ಬಿಡಿಸಿಕೊಳ್ಳಲು ಈ ಹಿಂದೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದ ಸ್ವತ್ತಿನ ಮಾಲಿಕ ಕೃಷ್ಣಪ್ಪ ಅವರ ಅರ್ಜಿಗೆ ಹಿಂಬರಹದಲ್ಲಿ ಈ ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ, ಕುಂದಾಣ ಹೋಬಳಿ ಆರ್‌ಐ ವರದಿ ಪಡೆದುಕೊಂಡು, ಜಮೀನಿಗೆ ಗ್ರಾಮದ ಮುಖ್ಯ ರಸ್ತೆಯಿಂದ ಸರ್ವೆ ನಂ.25ರ ಶ್ಯಾನುಬೋಗ್ ಇನಾಂತಿ ಜಮೀನಿನ ಮೂಲಕ ಸುಮಾರು 50 ವರ್ಷಗಳಿಂದ ಓಡಾಡಲು ರಸ್ತೆ ಸಂಪರ್ಕವಿದ್ದು, ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಓಡಾಡಲು ಸರ್ವೆ ನಂ.25ರ ಖಾತೆದಾರರು ಅಡ್ಡಿಪಡಿಸುತ್ತಾರೆ ಎಂದು ಗ್ರಾಮಸ್ಥರ ಹೇಳಿಕೆಯಂತೆ ತಿಳಿದುಬಂದಿದೆ.
ಗ್ರಾಮದ ಸರ್ವೆ ನಂ.56/1ರ ಜಮೀನು ಮೂಲತಃ ಇನಾಂತಿ ಜಮೀನಾಗಿದ್ದು, ಪಕ್ಕದ ಜಮೀನಿನ ಸರ್ವೆ ನಂ.25ರ ಖಾತೆದಾರರು ಒಡಾಡಲು ರಸ್ತೆ ಬಿಟ್ಟಿದ್ದು, ಈಗ ರಸ್ತೆ ಮುಚ್ಚಿದ್ದಾರೆ. ಈ ಸ್ವತ್ತಿನಲ್ಲಿ ರಸ್ತೆಯು ನಕಾಶೆ ರಸ್ತೆಯಾಗಿರುವುದಿಲ್ಲ ಎಂದು ತಿಳಿಸಿ, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಸೂಚಿಸಲಾಗಿದೆ.
ಓಡಾಡಲು ತೊಂದರೆ: ಈ ವಿಚಾರವಾಗಿ ಸರ್ವೆ ನಂ.56/1ರ ಅರ್ಜಿದಾರ ಕೃಷ್ಣಪ್ಪ ಮಾತನಾಡಿ, ಇನಾಂತಿ ಜಮೀನಿನ ಖಾತೆದಾರರು ಗಲಾಟೆ ಮಾಡುತ್ತಿದ್ದಾರೆ. 1982ರಲ್ಲಿ ಇವರಿಗೆ ಆಗಿರುತ್ತದೆ. ಈ ಹಿಂದೆ ನಮ್ಮ ತಾತಾ ಮುತ್ತಾತರ ಕಾಲದಿಂದಲೂ ಓಡಾಡುವ ರಸ್ತೆಯಾಗಿತ್ತು. ಇತ್ತೀಚೆಗೆ ರಸ್ತೆ ಮುಚ್ಚಿ ತೊಂದರೆ ಕೊಟ್ಟಿದ್ದಾರೆ. 50 ವರ್ಷದಿಂದ ರಸ್ತೆ ಇದೆ ಎಂದು ಅಧಿಕಾರಿಗಳು ಮಹಜರ್ ಮಾಡಿದ್ದಾರೆ. ಈ ಮಹಜರ್ ಆಧಾರದಲ್ಲಿ ನ್ಯಾಯಲದಲ್ಲಿಯೂ ಸಹ ನನ್ನ ಪರವಾಗಿ ಇಂಜಕ್ಷನ್ ಆರ್ಡರ್ ಆಗಿದೆ. ಈಗ ರಸ್ತೆಯಲ್ಲಿ ಓಡಾಡಲು ಖಾತೆದಾರರಲ್ಲಿ ನಾಲ್ಕು ಮಂದಿ ತೊಂದರೆ ಕೊಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ರಸ್ತೆ ಬಿಡವ ಉಲ್ಲೇಖವಿಲ್ಲ: ಇನಾಂತಿ ಸ್ವತ್ತಿನ ಖಾತೆದಾರರಾದ ಶ್ರೀನಿವಾಸ್‌ಮೂರ್ತಿ, ರಾಘವೇಂದ್ರ ಮಾತನಾಡಿ, ಸುಮಾರು 30 ವರ್ಷಗಳಿಂದ ಶಾನ್‌ಭೋಗ್ ನೌಕರಿ ಇನಾಂತಿ ಜಮೀನಿನಲ್ಲಿ ನಾವೇ ಅನುಭೋಗದಲ್ಲಿದ್ದೇವೆ. ನಾವ್ಯಾರು ಇಲ್ಲದಿರುವಾಗ ಕೋರ್ಟ್ ಆದೇಶವಾಗಿದೆ ಎಂದು ಹೇಳಿಕೊಂಡು ಏಕಾಏಕಿಯಾಗಿ ರಸ್ತೆಗೆ ಜೆಸಿಬಿ ಮೂಲಕ ಕಲ್ಲಿನ ಕೂಚ, ನಿಂಬೆ ಗಿಡಗಳನ್ನು ಕಿತ್ತುಹಾಕಿ ದೌರ್ಜನ್ಯ ಎಸಗಿದ್ದಾರೆ.
ಎಲ್ಲಿಯೂ ಸಹ ಕೋರ್ಟ್ ಆದೇಶದಲ್ಲಿ ರಸ್ತೆ ಬಿಡಬೇಕೆಂದು ಉಲ್ಲೇಖೀಸಿಲ್ಲ. ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಊರಿನ ಮುಖಂಡರಲ್ಲಿ ನ್ಯಾಯಕ್ಕಾಗಿ ಹೋದರೆ, ಯಾರು ಸಹ ಬರುತ್ತಿಲ್ಲ. ಅದ್ದರಿಂದ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.