Advertisement

ಬೇಡಿಕೊಂಡ್ರೂ ಕ್ಷೇತ್ರಕ್ಕೆ ಈಶ್ವರಪ್ಪ 1 ರೂ. ಕೊಡಲಿಲ್ಲ

03:28 PM Apr 26, 2022 | Team Udayavani |

ಬೇಲೂರು: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಬೇಡಿಕೊಂಡರೂ ಬೇಲೂರು ಕ್ಷೇತ್ರಕ್ಕೆ 1 ರೂ. ಬಿಡುಗಡೆ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಈಗ ಅವರ ಪರಿಸ್ಥಿತಿ ಏನಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ವ್ಯಂಗ್ಯವಾಡಿದರು.

Advertisement

ತಾಲೂಕಿನ ಕುಶಾವಾರ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಆಗಿದ್ದ 1.50 ಕೋಟಿ ರೂ. ಅನುದಾನದಲ್ಲಿ ತೊಳಲು – ತಗರೆ ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿ.ಟಿ.ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ತಮ್ಮ ಪತ್ನಿ ತವರೂರಾದ ಕುಶಾವರ ಗ್ರಾಮದ ತೊಳಲು ತಗರೆ ಸಂಪರ್ಕ ರಸ್ತೆಗೆ 1.50 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು ಎಂದು ಹೇಳಿದರು.

 880 ಕೋಟಿ ರೂ. ವಾಪಸ್‌: ಈ ಯೋಜನೆಯಲ್ಲಿ 2.5 ಕಿ.ಮೀ. ರಸ್ತೆ ಡಾಂಬರೀಕರಣ, ನಾಲ್ಕು ಕಿರುಸೇತುವೆ ಇರಲಿದೆ. 3 ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕೊಟ್ಟಿದ್ದ 880 ಕೋಟಿ ರೂ. ಅನುದಾನ ಬಿಜೆಪಿ ಸರ್ಕಾರ ವಾಪಸ್‌ ಪಡೆಯಿತು. ಸಚಿವರಾಗಿದ್ದ ಸಿ.ಟಿ.ರವಿ, ಸಚಿವ ಮಾಧುಸ್ವಾಮಿ ಕೈಲಾದಷ್ಟು ಅನುದಾನ ನೀಡಿದ್ದನ್ನು ಶ್ಲಾಘಿಸಿದರು.

ರಣಘಟ್ಟ ಯೋಜನೆ ಜಾರಿಗೆ ಸಹಕಾರ: ಹಳೇಬೀಡು ಕೆರೆ ತುಂಬಿದರೆ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ, ಕೆರೆ ಕಟ್ಟೆ ಒಡ್ಡುಗಳಿಗೆ ನೀರು ಹರಿಯುತ್ತದೆ ಎಂಬುದನ್ನು ಅರಿತ ಸಿ.ಟಿ.ರವಿ, ಮಾಧುಸ್ವಾಮಿ ರಣಘಟ್ಟ ಯೋಜನೆ ಕ್ಯಾಬಿನೆಟ್‌ನಲ್ಲಿ ಪಾಸ್‌ ಆಗಲು ಸಹಕರಿಸಿದರು ಎಂದು ಹೇಳಿದರು.

ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ: ಈಶ್ವರಪ್ಪ ಸಚಿವರಾಗಿದ್ದ 3 ವರ್ಷ ನಯಾಪೈಸೆ ತಾಲೂಕಿಗೆ ಕೊಡಲಿಲ್ಲ. ಈಗ ಅವರು ಎಲ್ಲಿದ್ದಾರೆ ಎಂಬುದನ್ನು ನೆನೆಯಬೇಕು. ಇದ್ದಾಗ ಸಹಾಯ ಮಾಡಿದರೆ ಎಲ್ಲರೂ ನೆನೆಯುತ್ತಾರೆ. ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬಿಜೆಪಿ ನಾಯಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳಿಗೆ ಜವಾಬ್ದಾರಿ ಇದ್ದಾಗ ಮಾತ್ರ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಸತತ ಗೆಲುವು ಸಾಧಿಸುತ್ತಿದ್ದ ಸಗೀರ್‌ ಅಹಮದ್‌ರಂತಹ ಘಟಾನುಘಟಿಗಳ ಮುಂದೆ ನಮ್ಮ ಪತಿ ಸಿ.ಟಿ.ರವಿ ಸತತ ಗೆಲುವು ಸಾಧಿಸುತ್ತಿರುವುದು ಅವರ ಅಭಿವೃದ್ಧಿ ಕೆಲಸದಿಂದ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಪತಿ ಸಿಎಂ ಆದ್ರೆ ಈಡೇರುತ್ತವೆ: ಸಿ.ಟಿ.ರವಿ ಉತ್ತಮ ಆಡಳಿತಗಾರ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈಗಾಗಲೇ ಶಾಸಕ ಕೆ.ಎಸ್‌. ಲಿಂಗೇಶ್‌ ಅವರು ತಾಲೂಕಿನ, ನನ್ನ ತವರು ಮನೆ ಗ್ರಾಮದ ಅಭಿವೃದ್ಧಿ ಬಗ್ಗೆ ಪಟ್ಟಿಕೊಟ್ಟಿದ್ದಾರೆ. ಇವೆಲ್ಲ ನಡೆಯಬೇಕೆಂದರೆ ನಮ್ಮ ಪತಿ ಈ ರಾಜ್ಯದ ಸಿಎಂ ಆಗಬೇಕು. ಆಗ ಖಂಡಿತ ನಾನು ನಿಮ್ಮ ಭರವಸೆ ಈಡೇರಿಸುತ್ತೇನೆ ಎಂದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ, ಎಪಿಎಂಸಿ ಮಾಜಿ ಅಧ್ಯಕ್ಷ ಅದ್ದೂರಿಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಜಯಮೂರ್ತಿ, ನಾಗರಾಜು, ಮಂಜುನಾಥ್‌, ಕೌರಿ ಸಂಜಯ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next