ತುಮಕೂರು: ನಗರದ ಪ್ರಮುಖ ಪ್ರದೇಶ ಆಗಿರುವ ದಿಬ್ಬೂರಿನ ರಸ್ತೆಗಳ ಅಭಿವೃದ್ಧಿಗಾಗಿ ಬಹಳ ಬೇಡಿಕೆ ಇತ್ತು. ಮುಂದಿನ 3-4 ತಿಂಗಳಲ್ಲಿ ದಿಬ್ಬೂರಿನ ಚಿತ್ರಣ ಬದಲಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ದಿಬ್ಬೂರಿನಲ್ಲಿ 309 ಲಕ್ಷ ರೂ. ವೆಚ್ಚದಲ್ಲಿ 2.08 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ದಿಬ್ಬೂರಿನ ಬಗ್ಗೆ ತೆಗಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಈಗ ಅದೆಲ್ಲ ಮುಗಿದ ಅಧ್ಯಾಯ. ಮುಂದಿನ 3-4 ತಿಂಗಳೊಳಗೆ ಈ ವಾರ್ಡ್‌ನಲ್ಲಿ ರಸ್ತೆ, ಚರಂಡಿ ಸೇರಿ ಅಗತ್ಯ ಸೌಕರ್ಯಗಳು ಜನತೆಗೆ ಸಿಗಲಿದ್ದು, ದಿಬ್ಬೂರಿನ ಚಿತ್ರಣವೇ ಬದಲಾಗುತ್ತದೆ ಎಂದು ಭರವಸೆ ನೀಡಿದರು.
ರಸ್ತೆ, ಚರಂಡಿ ಕಾಮಗಾರಿ: ಈ ಭಾಗದಲ್ಲಿ ಮಳೆ ಬಂದಾಗ ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿತ್ತು. ದಿಬ್ಬೂರು ಸರ್ಕಲ್‌ನಿಂದ ಸಿರಾಗೇಟ್‌ವರೆಗೂ ಜನರ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡು ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ರಸ್ತೆ ನಿರ್ಮಾಣಕ್ಕೆ ಹಣ: ದಿಬ್ಬೂರು ಸರ್ಕಲ್‌ನಿಂದ ಹಳೇ ಚೆಕ್‌ಪೋಸ್ಟ್ ವರೆಗೂ ಸ್ಮಾರ್ಟ್‌ಸಿಟಿ ವತಿಯಿಂದ ರಸ್ತೆ ನಿರ್ಮಾಣಕ್ಕೆ ಹಣ ಕೊಡಲಾಗಿದೆ. ಹಾಗೆಯೇ, ಸರ್ಕಾರದಿಂದ ಶಾಸಕರಿಗೆ ನೀಡಿರುವ ಅನುದಾನದ ಹಣವನ್ನು ಎಲ್ಲೆಲ್ಲಿ ಸಮಸ್ಯೆ ಜಾಸ್ತಿ ಇದೆಯೋ ಅಲ್ಲಿಗೆ ನೀಡಲಾಗಿದೆ ಎಂದ ಅವರು, ಪಿಡ ಬ್ಲ್ಯೂಡಿ ಇಲಾಖೆಯಿಂದ ಗುಣಮಟ್ಟದ ರಸ್ತೆ ಮಾಡಲಾಗುತ್ತಿದೆ. ಮುಂದಿನ ಒಂದೂವರೆ ತಿಂಗಳೊಳಗಾಗಿ ಈ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ: ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಿಂದ ಅಂಗನವಾಡಿ ಕೇಂದ್ರಗಳು, ಶಾಲೆಗಳ ನಿರ್ಮಾಣ ಸಹ ಮಾಡ ಲಾಗುತ್ತಿದೆ. ಹಾಗೆಯೇ ಇನ್ನೊಂದು ತಿಂಗಳಲ್ಲಿ ಈ ಭಾಗದಲ್ಲಿ ಸರ್ಕಾರದಿಂದ ನಮ್ಮ ಕ್ಲಿನಿಕ್ ಸಹ ತೆರೆಯಲಾಗುತ್ತದೆ. ಈ ನಮ್ಮ ಕ್ಲಿನಿಕ್ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಹೊರ ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ವಿವರಿಸಿದರು.
ನಮ್ಮ ಕ್ಲಿನಿಕ್ ತೆರೆಯುತ್ತೇವೆ: ತುಮಕೂರು ನಗರಕ್ಕೆ 7 ನಮ್ಮ ಕ್ಲಿನಿಕ್‌ಗಳು ದೊರೆತಿದ್ದು, ಈಗಾಗಲೇ ಮರಳೂರು, ಮೆಳೇಕೋಟೆಯಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ಅಗತ್ಯ ಇರುವ ವಾರ್ಡ್ ಗಳಲ್ಲಿ ಈ ನಮ್ಮ ಕ್ಲಿನಿಕ್ ತೆರೆಯಲಾಗು ವುದು ಎಂದು ಅವರು ಹೇಳಿದರು. ಮುಖಂಡ ಮನೋಹರಗೌಡ ಮಾತ ನಾಡಿ, ನಮ್ಮ ವಾರ್ಡ್‌ನಲ್ಲಿ 4 ಅಶ್ವತ್ಥಕಟ್ಟೆ, 4 ಅಂಗನವಾಡಿ ಕೇಂದ್ರಗಳು, 6 ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಿಸಲಾಗಿದೆ. ಶಾಸಕರು ನಮ್ಮ ಒಂದೇ ವಾರ್ಡ್‌ಗೆ 3 ಕೋಟಿ ರೂ. ಹಣ ವನ್ನು ನೀಡಿದ್ದು, ರಸ್ತೆ, ಚರಂಡಿಗಳ ಅಭಿ ವೃದ್ಧಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪ ಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ವೀಣಾ ಮನೋಹರಗೌಡ, ಜೆ. ಕುಮಾರ್, ಟೂಡಾ ಮಾಜಿ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ, ಈ ಭಾಗದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.