Advertisement
ಈ ಹಿಂದೆ ಪಂಪ್‌ವೆಲ್ ಹಾಗೂ ಉರ್ವದಲ್ಲಿದ್ದ ಎರಡು ಮರಗಳನ್ನು ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಬಂಟ್ಸ್ ಹಾಸ್ಟೆಲ್ ಬಸ್ ನಿಲ್ದಾಣದ ಸಮೀಪದಲ್ಲೇ ಇದ್ದ ಅಶ್ವತ್ಥ ಮರ ಎಲ್ಲರಿಗೂ ಚಿರಪರಿಚಿತ. ಬಸ್ ನಿಲ್ದಾಣದ ಸಮೀಪವೇ ಇದ್ದುದ್ದರಿಂದ ಎಲ್ಲರೂ ಅಶ್ವತ್ಥ ಮರದಡಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ಬಸ್‌ಗಾಗಿ ಕಾದು ನಿಂತ ಸಹಸ್ರ ಸಂಖ್ಯೆಯ ಪ್ರಯಾಣಿಕರಿಗೆ ಅಶ್ವತ್ಥ ಮರವು ನೆರಳು ನೀಡಿತ್ತು. ಜತೆಗೆ ಅಶ್ವತ್ಥ ಮರದ ಬಗ್ಗೆ ಹಿಂದೂ ಧರ್ಮದಲ್ಲಿ ಪೂಜ್ಯನೀಯ ನಂಬಿಕೆ ಇರುವುದರಿಂದ ಈ ಮರಕ್ಕೆ ಬಹುತೇಕ ಜನರು ಪೂಜೆ ಕೂಡ ಸಲ್ಲಿಸುತ್ತಿದ್ದರು. ಜತೆಗೆ ಪರಿಸರಪ್ರಿಯ ಮನಸ್ಸುಗಳಿಗೆ ಈ ಮರದ ಬಗ್ಗೆ ಅತೀವ ಪ್ರೀತಿ ಬೆಳೆದಿತ್ತು. ರಸ್ತೆ ಅಭಿವೃದ್ಧಿಯ ನೆಪದಲ್ಲಿ ಉರುಳಿಸುವ ಬಗ್ಗೆ ಮಾತು ಕೇಳಿ ಬಂದಾಗಲೇ ಎಲ್ಲ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಡಿಯುವ ಬದಲು ಇನ್ನೊಂದು ಕಡೆಗೆ ಸ್ಥಳಾಂತರಿಸುವ ಕುರಿತಂತೆ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಅಂತಿಮವಾಗಿ ಪರಿಸರಪ್ರಿಯರ, ಸ್ಥಳೀಯರ ಒತ್ತಾಯಕ್ಕೆ ಮಣಿದ ಮಹಾನಗರ ಪಾಲಿಕೆ ರವಿವಾರ ಮರವನ್ನೇ ಸ್ಥಳಾಂತರಿಸಲು ನಿರ್ಧರಿಸಿ, ಯಶಸ್ವಿ ಕಂಡಿದೆ.
ಸ್ಥಳಾಂತರ ಕಾಮಗಾರಿ ರವಿವಾರ ಬೆಳಗ್ಗೆ 5.30ಕ್ಕೆ ಆರಂಭಗೊಂಡು ಸಂಜೆ ಸುಮಾರು 7.30ಕ್ಕೆ ಮುಕ್ತಾಯಗೊಂಡಿತು. ಬೇರುಗಳು ಭೂಮಿಯಡಿ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪಾಲಿಕೆ ಜೇಸಿಬಿ ಕಾಮಗಾರಿ ಕೈಗೊಂಡಿತ್ತು. ಸಂಜೆ ಸುಮಾರು 4.30ರ ವೇಳೆಗೆ ಮರವನ್ನು ಬುಡಸಮೇತ ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ, ಬೃಹತ್ ಗಾತ್ರದ ಲಾರಿಯಲ್ಲಿ ಇರಿಸಲಾಯಿತು. ಆ ಬಳಿಕ ಲಾರಿ ನಿಧಾನವಾಗಿ ಸುಮಾರು 50 ಮೀಟರ್ ದೂರ ಚಲಿಸಿ, ಸಿವಿ ನಾಯಕ್ ಹಾಲ್ ಮುಂಭಾಗಕ್ಕೆ ಆಗಮಿಸಿತು. ಬಂಟ್ಸ್ ಹಾಸ್ಟೆಲ್ – ಪಿವಿಎಸ್ ರಸ್ತೆಯನ್ನು ಕೆಲವು ಸಮಯ ಬಂದ್ ಮಾಡಲಾಗಿತ್ತು.
Related Articles
Advertisement
ಚತುಷ್ಪಥ ರಸ್ತೆ ನಿರ್ಮಾಣಬಂಟ್ಸ್ಹಾಸ್ಟೆಲ್ ಅತೀ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶ. ಆದರೆ ಇಲ್ಲಿ ಲೇನ್ ಹಾಗೂ ಫುಟ್‌ಪಾತ್ ಇರಲಿಲ್ಲ. ಹಾಗಾಗಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಅಶ್ವತ್ಥ ಮರವನ್ನು ಸ್ಥಳಾಂತರಿಸಿ 4 ಲೇನ್ ಹಾಗೂ ಫುಟ್‌ಪಾತ್ ಕಾಮಗಾರಿಯನ್ನು ನಡೆಸಲಾಗುತ್ತದೆ.
- ಮಹಮ್ಮದ್ ನಝೀರ್, ಮನಪಾ ಆಯುಕ್ತ ಮರಗಳ ರಕ್ಷಣೆ ನಮ್ಮ ಹೊಣೆ
ಪಿವಿಎಸ್‌ನಿಂದ ಬಂಟ್ಸ್ ಹಾಸ್ಟೆಲ್‌ವರೆಗೆ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಕರಂಗಲ್ಪಾಡಿ ವೃತ್ತ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಅಶ್ವತ್ಥ ಮರವನ್ನು ಸ್ಥಳಾಂತರಿಸಲಾಗಿದೆ. ಕಾಮಗಾರಿಯಲ್ಲಿ ಪಾಲಿಕೆ ಅಧಿಕಾರಿಗಳು, ಮೆಸ್ಕಾಂ, ಟ್ರಾಫಿಕ್ ಪೊಲೀಸರ ಪಾತ್ರ ಶ್ಲಾಘನೀಯ.
– ಡಿ.ಕೆ. ಅಶೋಕ್,
ಕಾರ್ಪೊರೇಟರ್