ಚನ್ನಪಟ್ಟಣ: ರಸ್ತೆಯಲ್ಲಿ ಸಂಚಾರ ಮಾಡೋದೆ ಕಷ್ಟ. ರಸ್ತೆಗೆ ಜಲ್ಲಿ ಹಾಕಿ ತಿಂಗಳು ಕಳೆದರೂ ಡಾಂಬರು ಹಾಕಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಅರ್ಧಕ್ಕೆ ರಸ್ತೆ ಕಾಮಗಾರಿ ನಿಂತಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಯಾವ ಕ್ಷೇತ್ರದ ರಸ್ತೆ ಗೊತ್ತಾ!
ಇದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ರಸ್ತೆ ಕಾಮಗಾರಿ ಪ್ರಸ್ತುತ ಸ್ಥಿತಿ.
ತಾಲೂಕಿನ ಮಾಕಳಿ ಮಧ್ಯಭಾಗದಲ್ಲಿರುವ ರಾಮನಾಥಪುರ ಅಲ್ಲಿಂದ ನಾಗವಾರ ರಸ್ತೆ ಕಾಮಗಾರಿ ಕೆಲಸ ಸ್ಥಗಿತಗೊಂಡಿದೆ. ರಸ್ತೆಗೆ ಖಾಲಿ ಜಲ್ಲಿ ಹಾಕಿ ಸುಮಾರು ತಿಂಗಳಾದರೂ ಕೂಡ ರಸ್ತೆಗೆ ಡಾಂಬರು ಹಾಕಿಲ್ಲ. ದಾರಿಹೋಕರಿಗೆ ನಡೆದು ಹೋದರೆ, ವಯಸ್ಸಾದವರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೋಗುವವರಿಗೆ ತುಂಬಾ ಅನಾನುಕೂಲವಾಗಿದ್ದು, ಕ್ರಷರ್ ಲಾರಿಗಳು, ಬಸ್ ಹೀಗೆ ದೊಡ್ಡ ವಾಹನಗಳು ಸಂಚರಿಸಿದರೆ ಪಾದಚಾರಿಗಳು, ಸೈಕಲ್, ದ್ವಿಚಕ್ರ ವಾಹನಗಳು ಹೋಗುವುದೇ ಕಷ್ಟವಾಗಿದೆ. ಈ ಕಾಮಗಾರಿಯ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.
ರಸ್ತೆ ಕಾಮಗಾರಿಗೆ ಹಣ ಎಷ್ಟು: ಇದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿಯಾಗಿದೆ. ಚನ್ನಪಟ್ಟಣ ತಾಲೂಕಿನ ರಮನಾಥಪುರದಿಂದ ಮೈಲನಾಯಕಹಳ್ಳಿ ಹಾಗೂ ನಾಗವಾರದಿಂದ ದಶವಾರದ ವರೆಗೆ ರಸ್ತೆ ಡಾಂಬಾರಿಗಾಗಿ ಸುಮಾರು 8.8 ಕಿ.ಮೀ ಉದ್ದದ ರಸ್ತೆ ಕಾಮಗಾರಿಯಾಗಿದೆ. ಇದಕ್ಕಾಗಿಯೇ ಸುಮಾರು 554 ಕೋಟಿ 5 ಲಕ್ಷ ರೂ. ಖರ್ಚು ಮಾಡಲಾಗುತ್ತಿದ್ದು, ಈ ರಸ್ತೆ ಕಾಮಗಾರಿಗೆ ಐದು ವರ್ಷಗಳ ನಿರ್ವಹಣೆ ವೆಚ್ಚ 48.07 ಲಕ್ಷ ನಿಗದಿ ಹಾಗೂ 6ನೇ ವರ್ಷ ಮರು ಡಾಂಬರೀಕರಣಕ್ಕೆ 51.5 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಇದುವರೆಗೂ ಗುತ್ತಿಗೆದಾರ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಐದಾರು ತಿಂಗಳಾದರೂ ಕಾಮಗಾರಿ ಮುಗಿದಿಲ್ಲ: ಪ್ರತಿ ನಿತ್ಯ ಕೂಡ ಈ ರಸ್ತೆ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಇದಲ್ಲದೆ, ಐದಾರು ಗ್ರಾಮಗಳು ಕೂಡ ಇದೇ ರಸ್ತೆ ಮಾರ್ಗವಾಗಿ ಸಿಗುತ್ತವೆ. ಐದಾರು ತಿಂಗಳು ಕಳೆದರೂ ಕೂಡ ರಸ್ತೆ ಕಾಮಗಾರಿ ಮುಗಿದಿಲ್ಲ. ರಸ್ತೆಗೆ ಜಲ್ಲಿ ಹಾಕಿ ಜನರು ಓಡಾಡುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ದಶವಾರ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಮರ್ಪಕವಾಗಿ ಜಲ್ಲಿ ಹಾಕಿಲ್ಲ: ಕೋಟ್ಯಂತರ ರೂ. ಖರ್ಚು ಮಾಡಿ ಗ್ರಾಮೀಣ ಭಾಗ ಜನರಿಗೆ ಸಾರಿಗೆ ಅನುಕೂಲವಾಗಲೆಂದು ರಸ್ತೆ ಕಾಮಗಾರಿ ಮಾಡಲಾ ಗುತ್ತಿದೆ. ಆದರೆ, ಕಾಮಗಾರಿ ಗುಣಮಟ್ಟ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ರಸ್ತೆ ಗುತ್ತಿಗೆ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ ನಂತರ ನಾವು ಡಾಂಬಾರು ಹಾಕುವ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಇನ್ನು ಒಂದು ತಿಂಗಳ ಒಳಗಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸಂಚರಿಸಲು ಅನುಕೂಲ ಮಾಡಿಕೊಡುತ್ತೇವೆ.
– ಗೋವಿಂದಹಳ್ಳಿ ನಾಗರಾಜು, ಗುತ್ತಿಗೆದಾರ