ಕೊರಟಗೆರೆ: ಪಟ್ಟಣದಲ್ಲಿ ಸುಮಾರು 2.5 ವರ್ಷದಿಂದ ನಡೆಯುತ್ತಿರುವಂತಹ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಮತ್ತು ಡಬಲ್ ರಸ್ತೆ ಕಾಮಗಾರಿ ಇದಾಗಿದ್ದು, ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಸಾರ್ವಜನಿಕರಿಗೆ ಹಾಗು ವಾಹನಗಳಿಗೆ ಓಡಾಡಲು ಯಾವುದೇ ಅನುಕೂಲವಾಗಿಲ್ಲ.
ಉಳಿದ ಒಂದು ಭಾಗವು ಕಳೆದ 2 ತಿಂಗಳಿಂದ ಆಮೆ ತೆವಳುವ ರೀತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಲವು ಭಾರಿ ಇದರ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಿದಾಗ ಒಂದೊಂದು ಕಾರಣ ತಿಳಿಸಿ ಜಾರಿಕೊಳ್ಳುತ್ತಿದ್ದಾರೆ. ಒಂದು ಭಾಗದಲ್ಲಿ ಪೂರ್ಣಗೊಂಡಿರುವ ರಸ್ತೆ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಅನುಕೂಲವಾಗಲಿಲ್ಲ.
ಬೀದಿ ಬದಿ ವ್ಯಾಪರಿಗಳು ರಸ್ತೆ ಮಧ್ಯ ಭಾಗದಲ್ಲೇ ತಮ್ಮ ತಳ್ಳುವ ಗಾಡಿಗಳಲ್ಲಿ ವ್ಯಾಪರ ಮಾಡುತ್ತಿದ್ದು, ಸಾರ್ವಜನಿಕರು ಹಾಗೂ ವಾಹನಗಳು ಒಂದೇ ರಸ್ತೆಯಲ್ಲಿ ಓಡಾಡುವ ಇಕ್ಕಟ್ಟಿನ ಪರಿಸ್ಥಿತಿ ಪಟ್ಟಣದ ಎಸ್.ಎಸ್.ಆರ್ ವೃತ್ತದಲ್ಲಿ ಉಂಟಾಗಿದೆ.
ವಾಹನ ಸವಾರರು ಮತ್ತು ಪ್ರಯಾಣಿಕರು ಈ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಹಲವು ಭಾರಿ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ರಸ್ತೆ ಕಾಮಗಾರಿ ಮುಗಿಯದ ಹಿನ್ನೆಲೆ ಸಾರ್ವಜನಿಕರು ಇಡೀ ದಿನ ಶಾಪ ಹಾಕುತ್ತಿದ್ದಾರೆ.
ಕಾಮಗಾರಿ ಮುಗಿದಿರುವ ಅರ್ಧ ರಸ್ತೆಯ ಮಧ್ಯದಲ್ಲೇ ತಳ್ಳುವ ಗಾಡಿಗಳಲ್ಲಿ ವ್ಯಾಪರ ಮಾಡುತ್ತಿರುವ ಬೀದಿ ಬದಿ ವ್ಯಾಪರಿಗಳಿಗೆ ಪ.ಪಂ ಯಾವ ರೀತಿಯಲ್ಲೂ ತೆಗೆಸುವ ಮನಸ್ಸು ಮಾಡಿಲ್ಲ.
ಇವೆಲ್ಲವನ್ನು ನೋಡಿ ಪ.ಪಂ ಕಚೇರಿ ಮುಂಭಾಗದಲ್ಲಿರುವ ಈ ವೃತ್ತದಲ್ಲಿ ಆಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಸಾರ್ವಜನಿಕರು ಪ.ಪಂ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.