Advertisement

ಮರಳು ಸಾಗಿಸಲು ನೇತ್ರಾವತಿ ಮಧ್ಯೆ ರಸ್ತೆ ನಿರ್ಮಾಣ!

10:56 AM Feb 01, 2018 | |

ಉಪ್ಪಿನಂಗಡಿ: ಇಳಂತಿಲ ಸಮೀಪ ನೇತ್ರಾವತಿ ನದಿಯಲ್ಲಿ ಮರಳು ತೆಗೆದು ಹೆದ್ದಾರಿಗೆ ಸಾಗಿಸಲು ನದಿ ಮಧ್ಯೆ ರಸ್ತೆ ನಿರ್ಮಿಸಲಾಗುತ್ತಿದ್ದು, ಪ್ರಾಕೃತಿಕವಾಗಿ ಹರಿಯುವ ನೀರಿಗೆ ತಡೆಯುಂಟಾಗಿದೆ, ನದಿ ನೀರು ಕಲುಷಿತವಾಗುತ್ತಿದೆ ಎಂಬ ದೂರುಗಳು ವ್ಯಕ್ತವಾಗಿವೆ.

Advertisement

ಹೆದ್ದಾರಿ ಚತುಷ್ಪಥ ಕಾಮಗಾರಿ ಸಲುವಾಗಿ ಇಳಂತಿಲ ಸಮೀಪ ಮರಳು ತೆಗೆಯಲು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಆದರೆ ಇದರ ಉಪ ಗುತ್ತಿಗೆ ಪಡೆದವರು ಉಪ್ಪಿನಂಗಡಿಯ ಹಳೆಗೇಟು ಬಳಿ ಹಿಟಾಚಿ ಬಳಸಿ ನೇತ್ರಾವತಿ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಿಸುತ್ತಿದ್ದು, ಇದು ಅವೈಜ್ಞಾನಿಕ ಎಂಬ ಆರೋಪ ವ್ಯಕ್ತವಾಗಿದೆ.

ಅಡ್ಡಹೊಳೆ-ಬಂಟ್ವಾಳ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಮರಳು ಬ್ಲಾಕ್‌ ಒಂದನ್ನು ಜಿಲ್ಲಾಧಿಕಾರಿಯವರು ಕಾಯ್ದಿರಿಸಿದ್ದಾರೆ. ಎಲ್‌ ಆ್ಯಂಡ್‌ ಟಿ ಮರಳು ತೆಗೆಯಲು ಮತ್ತೂಂದು ಸಂಸ್ಥೆಗೆ ಗುತ್ತಿಗೆ ವಹಿಸಿದೆ. ಈ ಸಂಸ್ಥೆ ಇಲ್ಲಿ ರಸ್ತೆ ಮಾಡುತ್ತಿದೆ. ಉಪ್ಪಿನಂಗಡಿ ಹಳೆಗೇಟಿನಿಂದ ನದಿಯ ಆಚೆ ಬದಿಗೆ ಲಾರಿಗಳು ಹೋಗಲು ನದಿಗೆ ಮಣ್ಣು ಹಾಕಿ ರಸ್ತೆ ಮಾಡುತ್ತಿದ್ದು, ನೀರಿನ ಹರಿವಿಗೆ ತಡೆಯಾಗಿದೆ. ಈ ಜಾಗಕ್ಕಿಂತ ಕೆಳಗೆ ಕುಡಿಯುವ ನೀರು ಸರಬರಾಜಿನ ಸಂಪ್‌ ಇದ್ದು, ನೀರು ಕಲುಷಿತವಾಗುತ್ತಿದೆ. ಕೆಸರು ನೀರು ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹಿಟಾಚಿ ಬಳಕೆ, ನದಿ ತಿರುವು
ನದಿಯಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ಹಿಂದೆ ಎರಡು ಕವಲಾಗಿ ಹರಿಯುತ್ತಿದ್ದ ನದಿ ಈಗ ರಸ್ತೆಯಿಂದಾಗಿ ಒಂದೇ ಮಗ್ಗುಲಲ್ಲಿ ಹರಿಯುವಂತಾಗಿದೆ. ನದಿ ಪಾತ್ರದ ಅರ್ಧ ಭಾಗಕ್ಕೆ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಮುಂದೆಯೂ ನದಿ ಹರಿವಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿದ್ದ ಸಂಸ್ಥೆಯ ಪ್ರತಿನಿಧಿ ಚರಣ್‌, ಚತುಷ್ಪಥ ರಸ್ತೆ ಕಾಮಗಾರಿ ಸಲುವಾಗಿ ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ಮರಳು
ತೆಗೆಯಲು ಪರವಾನಿಗೆ ದೊರೆತಿದೆ. ಅವರು ಮತ್ತೂಂದು ಸಂಸ್ಥೆಗೆ ಉಪ ಗುತ್ತಿಗೆ ನೀಡಿದ್ದಾರೆ. ಇದೀಗ ಈ ಸಂಸ್ಥೆಯ
ವತಿಯಿಂದ ಮರಳು ತೆಗೆಯಲು ರಸ್ತೆ ಮಾಡುತ್ತಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಪರಿಶೀಲಿಸಲು ಸೂಚನೆ
ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಮರಳು ತೆಗೆಯಲು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಆದರೆ ನದಿಯಲ್ಲಿ ರಸ್ತೆ ನಿರ್ಮಿಸಲು ಅವಕಾಶ ನೀಡಿಲ್ಲ. ಈ ರೀತಿಯಾಗಿದ್ದರೆ, ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪರಿಶೀಲನೆ ನಡೆಸಲು ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next