Advertisement

ಸಿರಿಚಂದನ ವನದಿಂದ ಕಲ್ಮಲೆಗೆ ಸುವ್ಯವಸ್ಥಿತ ರಸ್ತೆ ನಿರ್ಮಾಣ

07:05 AM Jul 29, 2017 | Karthik A |

ವೀರಕಂಭ: ಕೊನೆಗೂ ಸಮಸ್ಯೆ ಪರಿಹಾರ; ವಿದ್ಯುತ್‌ ಕಂಬಗಳ ಅಪಾಯದಿಂದಲೂ ಮುಕ್ತಿ

Advertisement

ವಿಟ್ಲ: ವೀರಕಂಭ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿರಿಚಂದನ ವನ ನಿರ್ಮಿಸಿದ ಬಳಿಕ ಸಮಸ್ಯೆಗಳು ಸೃಷ್ಟಿಯಾಗಿದ್ದವು. ಸಿರಿಚಂದನ ವನದ ಸುತ್ತ ಅಳವಡಿಸಿದ ಬೇಲಿಯಿಂದಾಗಿ ಕಲ್ಮಲೆ ಎಂಬ ಪ್ರದೇಶಕ್ಕೆ ರಸ್ತೆ ಸಂಪರ್ಕ ಬಾಧಿತವಾಗಿತ್ತು. ಅಲ್ಲದೆ ಕಾಡಿನ ನಡುವೆ ಇದ್ದ ವಿದ್ಯುತ್‌ ಕಂಬಗಳಿಂದ ಅಪಾಯ ಉಂಟಾಗಿತ್ತು. ಇದಕ್ಕೆ  ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ವಿಸ್ತ್ರತ‌ ವರದಿ ಪ್ರಕಟವಾಗಿತ್ತು. ಇದೀಗ ಆ ಸಮಸ್ಯೆ ಪರಿಹಾರವಾಗಿದೆ.

ಸುಸಜ್ಜಿತ ರಸ್ತೆ ನಿರ್ಮಾಣ
ಹಿಂದೆ ಇದ್ದ ಸುಮಾರು 320 ಮೀಟರ್‌ ಉದ್ದದ ಅಸುರಕ್ಷಿತ ರಸ್ತೆಯನ್ನು 15 ಅಡಿ ಅಗಲದ ಸುಸಜ್ಜಿತ ರಸ್ತೆಯನ್ನಾಗಿ ನಿರ್ಮಿಸಲಾಗಿದೆ. ಕಲ್ಲಡ್ಕ-ಕಾಂಞಂಗಾಡ್‌ ರಸ್ತೆಯ ಬದಿಯಿಂದ ಸಿರಿಚಂದನವನದ ಗೇಟ್‌ ತನಕ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಆ ಬಳಿಕ ಮಣ್ಣಿನ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗಿದೆ. ಇದೀಗ ಕಲ್ಮಲೆ ಭಾಗದ ಸುಮಾರು 25 ಕುಟುಂಬಗಳು ಈ ರಸ್ತೆಯನ್ನು ಬಳಸುತ್ತಿದ್ದು ಸಂತೋಷ ವ್ಯಕ್ತಪಡಿಸುತ್ತಿವೆ. ಅರಣ್ಯ ಇಲಾಖೆ ಈ ರಸ್ತೆಯನ್ನು ಪಂಚಾಯತ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಮೆಸ್ಕಾಂ ಕಂಬ ಸ್ಥಳಾಂತರ 
ಅಂತಾರಾಜ್ಯ ಹೆದ್ದಾರಿ ಪಕ್ಕದಲ್ಲೇ ವಿದ್ಯುತ್‌ ಪರಿವರ್ತಕವಿತ್ತು. ಆ ಪರಿವರ್ತಕದಿಂದ ಕಲ್ಮಲೆ ಪ್ರದೇಶಕ್ಕೆ ವಿದ್ಯುತ್‌ ಸರಬರಾಜು ಮಾಡಲಾಗುತ್ತಿತ್ತು. ಕಾಡಿನಲ್ಲೇ ವಿದ್ಯುತ್‌ ಕಂಬಗಳನ್ನು ಸ್ಥಾಪಿಸಿ ತಂತಿ ಅಳವಡಿಸಲಾಗಿತ್ತು. ಮರಗಳು ತಂತಿಗೆ ತಾಗಿ ಆಗಾಗ ಬೆಂಕಿಯ ಉಂಡೆಗಳು ಉರುಳಿ ಕಾಡು ಬೆಂಕಿಗೆ ಆಹುತಿಯಾಗುತ್ತಿತ್ತು. ಸ್ಥಳೀಯರು ಅದನ್ನು ನಂದಿಸುತ್ತಿದ್ದರು. ಸ್ಥಳೀಯರ ವಿನಂತಿ ಮೇರೆಗೆ ಸ್ಪಂದಿಸಿದ ಸ್ಥಳೀಯ ಶಾಸಕ, ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತು ಸ್ಥಳೀಯ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಅವರು ಸೂಕ್ತ ಕ್ರಮಕೈಗೊಂಡರು. ಇದೀಗ ಮೆಸ್ಕಾಂ ಸಿರಿಚಂದನವನದ ಗೇಟಿನಿಂದ ತೆರಳುವ ರಸ್ತೆ ಪಕ್ಕದಲ್ಲೇ ಕಂಬಗಳನ್ನು ಅಳವಡಿಸಿದೆ. ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ತಿಯಾಗಿದೆ. ಇದೀಗ ನಾಗರಿಕರಿಗೆ ವಿದ್ಯುತ್‌ ಅವಘಡದ ಭಯವಿಲ್ಲವೆನ್ನುತ್ತಿದ್ದಾರೆ. ಜತೆಗೆ ಅಲ್ಲೇ ಹೈಮಾಸ್ಟ್‌ ದೀಪವನ್ನು ಅಳವಡಿಸಿರುವುದರಿಂದ ನಾಗರಿಕರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

ನೀರು ಬಂತು
ಕಳೆದ ಎಷ್ಟೋ ವರ್ಷಗಳಿಂದ ಈ ಪ್ರದೇಶದ ನಾಗರಿಕರಿಗೆ ಬೇಸಗೆಯಲ್ಲಿ ಕುಡಿಯುವ ನೀರು ಇರಲಿಲ್ಲ. ಕಲ್ಮಲೆಯಲ್ಲಿ ಬಾವಿ, ಕೊಳವೆಬಾವಿಯೂ ಬತ್ತುತಿತ್ತು. ಬೇರೆ ವ್ಯವಸ್ಥೆಯೇ ಇಲ್ಲದೇ ಚಡಪಡಿಸುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ 3 ಕಿ.ಮೀ. ದೂರದ ಮಜಿ ಓಣಿಯಲ್ಲಿ ಕೊಳವೆಬಾವಿ ಕೊರೆಸಲಾಯಿತು. ಆರಂಭದಲ್ಲಿ ಅಳವಡಿಸಿದ ಪಿವಿಸಿ ಪೈಪ್‌ಗ್ಳು ನೀರಿನ ರಭಸಕ್ಕೆ ಪುಡಿಪುಡಿಯಾದವು. ಮತ್ತೆ ಕಬ್ಬಿಣದ ಪೈಪ್‌ಗ್ಳನ್ನು ಅಳವಡಿಸಿ, ನೀರು ಸರಬರಾಜು ಮಾಡಲಾಯಿತು. ಈ ವರ್ಷ ನೀರಿನ ಸಮಸ್ಯೆ ಇರಲೇ ಇಲ್ಲ.

Advertisement

ಕಾಮಗಾರಿಯಿಂದ ತೃಪ್ತಿಯಿದೆ 
ಜಿ.ಪಂ. ಸದಸ್ಯೆ ಮಂಜುಳಾ ಮಾವೆ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ನೀರು, ವಿದ್ಯುತ್‌, ರಸ್ತೆಗಳು ಮೂಲಆವಶ್ಯಕತೆಗಳು. ಆದರೆ ಈ ಹಿಂದುಳಿದ ಪ್ರದೇಶಕ್ಕೆ ಸುಲಭವಾಗಿ ಇಷ್ಟೊಂದು ಸೌಲಭ್ಯಗಳನ್ನು ನೀಡುವುದು ಸುಲಭವಲ್ಲ. ಅನುದಾನ ಮತ್ತು ಇಚ್ಛಾಶಕ್ತಿಯಿರಬೇಕು. ಆದುದರಿಂದ ಈ ಕಾಮಗಾರಿಯಿಂದ ನಮ್ಮ ಊರಿನವರಿಗೆ ಸಂಪೂರ್ಣ ತೃಪ್ತಿಯಿದೆ. 
– ಹರೀಶ್‌ ರೈ ಕಲ್ಮಲೆ, ಕೃಷಿಕರು

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next