ನಂಜನಗೂಡು: ಮತ ನೀಡಿದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಇಲ್ಲದ ನೀರು ಪಕ್ಕದ ರಾಜ್ಯಕ್ಕೆಕೆ ಎಂದು ಪ್ರಶ್ನಿಸಿ ತಾಲೂಕು ಕಬ್ಬು ಬೆಳೆಗಾರರ ಸಂಘ ಹಾಗೂ ರೈತಸಂಘಗಳ ಆಶ್ರಯದಲ್ಲಿ ಸೋಮವಾರ ರೈತರು ರಾಷ್ಟ್ರೀಯ ಹೆದ್ದಾರಿ 212 ತಡೆ ನಡೆಸಿ ಪ್ರತಿಭಟಿಸಿದರು.
ಕಬ್ಬುಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರಕಾರದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದಿಕ್ಕಾರ ಕೂಗಿ, ಮತನೀಡಿದ ನಮಗೆ ನೀರಿಲ್ಲ ಆದರೆ ಪಕ್ಕದ ರಾಜ್ಯಕ್ಕೆ ಮಾತ್ರ ನೀರು ಇದ್ಯಾವ ನ್ಯಾಯ ಮೊದಲು ನಮಗೆ ನೀರಿ ಕೊಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ಜಲಾಶಯ ತುಂಬುವ ಮೊದಲೆ ತಮಿಳುನಾಡಿಗೆ ನೀರು ಬಿಟ್ಟರೆ ಕಬಿನಿ, ಕಾವೇರಿ ಜಲಾಶಯಗಳು ತುಂಬುವುದು ಹೇಗೆ ನಿಮ್ಮನ್ನು ಆಯ್ಕೆ ಮಾಡಿದವರಿಗೆ ದ್ರೋಹ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಈಗಾಗಲೇ ರೈತರು ಮೂರು ವರ್ಷ ಸತತ ಬರ ದಿಂದ ಕಂಗೆಟ್ಟಿದ್ದಾರೆ, ಕೂಡಲೆ ಜಲಾಶಯಗಳಿಂದ ನದಿಗೆ ನೀರು ಹರಿಸುವುದನ್ನು ನಿಲ್ಲಿಸಿ ನಾಲೆಗಳಿಗೆ ಬಿಡಿ ಅಲ್ಲಿಯವರಿಗೂ ರಸ್ತೆ ತಡೆ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಹೋರಾಟದ ಸ್ಥಳಕ್ಕೆ ಆಗಮಿಸಿದ ಕಬಿನಿ ನೀರಾವರಿ ಮುಖ್ಯ ಎಂಜಿನಿಯರ್ ಮರಿಸ್ವಾಮಿ ಮಾತನಾಡಿ, ರೈತರು ಸಲ್ಲಿಸಿರುವ ಮನವಿಯನ್ನು ಮೇಲಿನ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಬುಧವಾರ ನೀರಾವರಿ ಸಲಹಾ ಸಮಿತಿ ಸಭೆ ಇದೆ, ಅಲ್ಲಿ ನಾಲೆಗಳಿಗೆ ನೀರು ಬಿಡುವ ಕುರಿತು ಚರ್ಚೆ ನಡೆಯಲಿದ್ದು ಅಲ್ಲಿಯವರಿಗೆ ಅವಕಾಶ ನೀಡಿ ಎಂದರು.
ಆದರೆ ಇದನ್ನೊಪ್ಪದ ರೈತರು ಕೂಡಲೇ ನೀರು ಹರಿಸಿ ಎಂದು ಪಟ್ಟು ಹಿಡಿದಾಗ ಮರಿಸ್ವಾಮಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತಮ್ಮ ವ್ಯಾಪ್ತಿಯ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗೆ ಈ ಕ್ಷಣದಿಂದಲೇ ನೀರು ಬಿಡಲಾಗುತ್ತದೆ. ಕಬಿನಿ ಬಲ ಹಾಗೂ ಎಡದಂಡೆಗಳಿಗೆ ಸಲಹಾ ಸಮಿತಿಯ ಸಭೆಯ ನಂತರವೇ ನೀರು ಎಂದು ತಿಳಿಸಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬೊಕ್ಕಳ್ಳಿ ನಂಜುಂಡಸ್ವಾಮಿ, ಅಂಬಳೆ ಮಂಜುನಾಥ್, ಸತೀಶ್ ರಾವ್, ಮಹಾದೇವಸ್ವಾಮಿ, ಕಪಿಲೇಶ, ದೊಡ್ಡೇಗೌಡ, ಸಿರಮಳ್ಳಿ ಸಿದ್ದಪ್ಪ, ಸಿಂಧುವಳ್ಳಿ ಬಸವಣ್ಣ, ಚಿಕ್ಕಸ್ವಾಮಿ, ಹಲ್ಲರೆ ಬಸವಣ. ಶಿವಣ್ಣ ಇದ್ದರು.