Advertisement

ರಸ್ತೆ ಅಪಘಾತಕ್ಕೆ ಸಂಚಾರ ಪೊಲೀಸರ ವೈಫ‌ಲ್ಯವೇ ಕಾರಣ!

11:48 AM Feb 06, 2022 | Team Udayavani |

ಬೆಂಗಳೂರು: ಹಗಲು ವೇಳೆಯಲ್ಲಿ ಭಾರೀ ವಾಹನಗಳಿಂದ ಉಂಟಾಗುತ್ತಿರುವ ರಸ್ತೆ ಅಪಘಾತಗಳು, ಸಂಚಾರ ದಟ್ಟಣೆಗೆ ಸಂಚಾರ ಪೊಲೀಸರೇ ನೇರ ಹೊಣೆ ಎಂದು ನಗರದ ಸ್ವಯಂ ಸೇವಾಸಂಸ್ಥೆಗಳು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಗಳು ಆರೋಪಿಸಿವೆ.

Advertisement

ಪೊಲೀಸ್‌ ಇಲಾಖೆಯೇ ಜಾರಿಗೆ ತಂದ ನಿಯಮಗಳನ್ನು ಪೊಲೀಸರೇ ಉಲ್ಲಂಘಿಸಿ ದರೆ ಯಾರ ವಿರುದ್ಧ ದೂರು ನೀಡುವುದು? ಅಮಾಯಕ ಜನರ ಜೀವಗಳ ಜತೆ ಚೆಲ್ಲಾಟವಾಡುವ ಭಾರೀ ವಾಹ ನಗಳ ಮಾಲೀಕರು ಹಾಗೂ ಸಂಚಾರ ಪೊಲೀಸರ ವಿರುದ್ಧ ಯಾರು ಕ್ರಮಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಭಾರೀ ವಾಹನಗಳು ನೆಪಮಾತ್ರಕಷ್ಟೇ ರಾತ್ರಿ ವೇಳೆನಗರ ಪ್ರವೇಶಿಸಿ, ಗೋಡೌನ್‌ ಅಥವಾ ಕೈಗಾರಿಕಾ ಪ್ರದೇಶ ಸೇರುತ್ತವೆ. ನಂತರ ವಸ್ತುಗಳನ್ನು ಅನ್‌ ಲೋಡ್‌ ಮಾಡುತ್ತಿದ್ದಂತೆ ಬೆಳಗ್ಗೆಯೂ ನಗರದಲ್ಲಿ ಸಂಚರಿಸುತ್ತವೆ. ಕೆಲವೊಮ್ಮೆ ಆ ವಾಹನಗಳ ಚಾಲಕರ ವೇಗಮೀತಿ ನೋಡಿದರೆ ಭಯವಾಗುತ್ತದೆ.

ಇನ್ನು ರೆಸಿಡೆನ್ಸಿ ಪ್ರದೇಶಗಳಲ್ಲಿ ಭಾರೀ ವಾಹನಗಳ ಪ್ರವೇಶ ನಿಷೇಧಿಸಿದೆ. ಆದರೂ ಓಡಾಡುತ್ತಿವೆ. ಈ ಬಗ್ಗೆ ವಾಹನ ಚಾಲಕರಿಗೆ ಪ್ರಶ್ನಿಸಿದರೆ, ಪೊಲೀಸರೇ ಪ್ರಶ್ನಿಸುವುದಿಲ್ಲ. ನೀವ್ಯಾರು ಕೇಳಲು ಎಂದು ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಕ್ರಮಕೈಗೊಳ್ಳಬೇಕಾದ ಸಂಚಾರ ಪೊಲೀಸರು ಕೈಕಟ್ಟಿ ಕೂತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ನಗರ ಪ್ರವೇಶ ನಿಷೇಧಿಸಿ, ವರ್ತುಲ ರಸ್ತೆಯಲ್ಲಿ ಅವಕಾಶ ಕೊಡಲಿ: ಭಾರೀ ವಾಹನಗಳು ಹಗಲು ವೇಳೆ ಯಲ್ಲಿ ಸಂಚರಿಸಬಾರದು ಎಂಬ ನಿಯಮವಿದೆ. ಆದರೂ ಇತ್ತೀಚೆಗೆ ನಗರದಲ್ಲಿ ಹೆಚ್ಚು ಸಂಚರಿಸುತ್ತಿದ್ದು, ರಸ್ತೆ ಅಪಘಾತಗಳಿಗೂ ಕಾರಣವಾಗಿದೆ. ಹೀಗಾಗಿ ಹೊರ್ತುಲ ರಸ್ತೆಗಳಲ್ಲಿ ಭಾರೀ ವಾಹನಗಳು ಸಂಚರಿಸಲು ಅವಕಾಶ ಕೊಟ್ಟು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ನಗರ ಪ್ರವೇಶಿಸಿ,ಅದೇ ಅವಧಿಯಲ್ಲಿ ವಾಪಸ್‌ ಹೋಗಲು ಸೂಚಿಸ ಬೇಕು. ಈ ನಿಯಮವನ್ನು ಕಡ್ಡಾಯವಾಗಿ ಪೊಲೀಸರು ಕಾರ್ಯಗತ ಮಾಡಬೇಕಿದೆ ಎನ್ನುತ್ತಾರೆ ನಮ್ಮ ಬೆಂಗಳೂರು ಫೌಂಡೇಷನ್‌ ವಿನೋದ್‌ ಜೋಕಬ್‌.

ವಾಹನ ಸಂಸ್ಥೆಗಳಿಂದ ಚಾಲನಾ ಪರವಾನಿಗೆ: ಟ್ರಕ್‌ ಸೇರಿ ಭಾರೀ ವಾಹನಗಳ ಚಾಲಕರು ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತಾರೆ. ಅದರಿಂದ ರಸ್ತೆ ಅಪಘಾತಗಳು ಉಂಟಾಗುತ್ತಿದ್ದು, ರಸ್ತೆಗಳು ಹಾಳಾಗುತ್ತವೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇನ್ನು ಸಾಕಷ್ಟು ಭಾರೀ ವಾಹನಗಳಲ್ಲಿ ಕ್ಲೀನರ್‌ಗಳೇ ವಾಹನ ಚಾಲಕರಾಗಿದ್ದಾರೆ. ಅವರಿಗೆ ಚಾಲನಾ ಪರವಾನಿಗೆ ಕೂಡ ಇರುವುದಿಲ್ಲ. ಹೀಗಾಗಿ”ವೋಲ್ವೋ ಸಂಸ್ಥೆಯೇ ತನ್ನ ವಾಹನ ಚಾಲಕರಿಗೆ ಚಾಲನಾ ತರಬೇತಿ ನೀಡುತ್ತದೆ. ಅದೇ ರೀತಿ ಭಾರೀ ವಾಹನಗಳ ಚಾಲಕರಿಗೂಆಯಾ ಸಂಸ್ಥೆಗಳೇ ತರಬೇತಿ ನೀಡಬೇಕು. ನಂತರಆರ್‌ಟಿಒ ಮೂಲಕ ಚಾಲನಾ ಪರವಾನಿಗೆ ಪಡೆದುಕೊಳ್ಳಬೇಕು. ಆಗ ರಸ್ತೆ ಅಪಘಾತಗಳು ಕಡಿಮೆಯಾಗುವ ಸಾಧ್ಯತೆಗಳಿವೆ’. ಮತ್ತೂಂದೆಡೆ ಭಾರೀ ವಾಹನಗಳ ನಗರ ಪ್ರವೇಶವನ್ನು ಕಡ್ಡಾಯವಾಗಿತಡೆಯಬೇಕಿದೆ ಎಂದು ವಿನೋದ್‌ ಜೋಕಬ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ  :

ನಗರದಲ್ಲಿ ಇತ್ತೀಚೆಗೆ ರೆಸಿಡೆನ್ಸಿ ಪ್ರದೇಶಗಳಲ್ಲಿ ಗೋದಾಮುಗಳು ಹೆಚ್ಚಾಗುತ್ತಿದ್ದು, ರಾತ್ರಿ ವೇಳೆ ಬರುವ ಭಾರೀ ವಾಹನಗಳು, ಬೆಳಗ್ಗೆ ಅಂಗಡಿ ತೆರೆಯುವವರೆಗೂ ಮನೆ, ಅಂಗಡಿಗಳ ಮಂಭಾಗವೇ ವಾಹನ ನಿಲ್ಲಿಸುತ್ತಾರೆ. ಲೇಔಟ್‌ನ 80 ಅಡಿ ರಸ್ತೆಯಲ್ಲಿ ಈ ಸಮಸ್ಯೆ ದಟ್ಟವಾಗಿದೆ. ಅದರಿಂದ ಸಂಚಾರ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಪೊಲೀಸರು, ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಎಚ್‌ಬಿಆರ್‌ ಲೇಔಟ್‌ ರೆಸಿಡೆನ್ಸಿ ವೇಲ್‌ಫ‌ರ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಜೆ.ತೋಳ್ಪಾಡಿ. ಅದಕ್ಕೆ ಕಾರ್ಯಾಂಗದ ವೈಫ‌ಲ್ಯ ಕಾರಣ. ಸರ್ಕಾರ ಅಥವಾ ಹಿರಿಯ ಅಧಿಕಾರಿಗಳು ಜಾರಿಗೊಳಿಸಿದ ನಿಯಮಗಳನ್ನು ಸರಿಯಾಗಿ ಜಾರಿಗೊಳಿಸಬೇಕಾಗಿದ್ದು, ಕೆಳ ಹಂತದ ಅಧಿಕಾರಿಗಳ ಕರ್ತವ್ಯ. ನಗರ ಪ್ರವೇಶಿಸುವ ಮೊದಲೇ ಭಾರೀ ವಾಹನಗಳನ್ನು ತಡೆದು, ನಿರ್ದಿಷ್ಟ ಸಮಯದಲ್ಲಿ ಅವುಗಳನ್ನು ಒಳಗಡೆ ಬಿಡಬೇಕು. ಆದರೆ, ಸಂಚಾರ ಪೊಲೀಸರು ಅಥವಾ ಗಡಿಭಾಗದಲ್ಲಿರುವ ಪೊಲೀಸರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸುತ್ತಾರೆ.

ಸೆಕ್ಟರ್‌ ರೀತಿ ವಿಂಗಡಿಸಲಿ :

ನಗರದಲ್ಲಿ ಹಳೇ ಕಟ್ಟಡ ಧ್ವಂಸಗೊಳಿಸಿ, ಹೊಸ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಅವುಗಳಿಗೆ ವಸ್ತುಗಳನ್ನು ಪೂರೈಸುವ ಭಾರೀ ವಾಹನಗಳು ಪೊಲೀಸರು ನಿಗದಿ ಪಡಿಸಿದ ಸಮಯ ಹೊರತು ಪಡಿಸಿ ಬೇರೆ ವೇಳೆಯಲ್ಲಿಯೂ ಸಂಚರಿಸುತ್ತಿವೆ. ಅದರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತದೆ. ಹೀಗಾಗಿ ಅಗತ್ಯ ವಸ್ತುಗಳ ಆಧಾರದ ಮೇಲೆಯೇ “ಸೆಕ್ಟರ್‌’ ರೀತಿ ವಿಂಗಡಣೆ ಮಾಡಿದರೆ, ಸಂಚಾರ ಸಮಸ್ಯೆ ಜತೆಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ತೊಡಕಾಗುವುದಿಲ್ಲ ಎನ್ನುತ್ತಾರೆ ಬಿಪ್ಯಾಕ್‌ ಸಂಸ್ಥೆಯ ಹರೀಶ್‌. ಕೈಗಾರಿಕೆ, ಕನ್‌ಸ್ಟ್ರಕ್ಷನ್‌, ಶಿಕ್ಷಣ, ಮೆಡಿಕಲ್‌, ತುರ್ತು ಸೇವೆಗಳು ಹೀಗೆ ಆಯಾ ನಾನಾ ಸೆಕ್ಟರ್‌ಗಳಂತೆ ವಿಂಗಡಣೆ ಮಾಡಬೇಕು. ಪ್ರತಿ ಸೆಕ್ಟರ್‌ಗಳಿಗೆ ಇದೇ ಸಮಯದಲ್ಲಿ(ಪೀಕ್‌ ಅವರ್‌ ಹೊರತು ಪಡಿಸಿ) ನಗರ ಪ್ರವೇಶಿಸಬೇಕು ಎಂದು ಸೂಚಿಸಬೇಕು. ಅದರಿಂದ ಸಂಚಾರ ದಟ್ಟಣೆ, ರಸ್ತೆ ಅಪಘಾತಗಳನ್ನು ತಡೆಯಬಹುದಲ್ಲದೆ, ಒಂದು ವೇಳೆ ರಸ್ತೆ ಅಪಘಾತ ಎಸಗಿದರೆ ಇಂತಹದ್ದೆ ವಾಹನ ಕೃತ್ಯ ಎಸಗಿರಬಹುದು ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದು ಹರೀಶ್‌ ಸಲಹೆ ನೀಡಿದರು.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next