ಪಟನಾ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಶೂನ್ಯ ಸಂಪಾದನೆ ಮಾಡಿದ್ದು, ಪಕ್ಷದ ಇತಿಹಾಸದಲ್ಲೇ ಅತಿ ಕಳಪೆ ಪ್ರದರ್ಶನ ನೀಡಿದ ಕುಖ್ಯಾತಿಗೆ ಒಳಗಾಗಿದೆ. ಆ ಮೂಲಕ ದಶಕಗಳ ಕಾಲ ಲಾಲೂ ಪ್ರಸಾದ್ ಯಾದವ್ ಅವರು ಮಾಡಿಕೊಂಡ ಬಂದಿದ್ದ ಜಾತಿ ಆಧಾರಿತ ರಾಜಕೀಯವನ್ನು ರಾಜ್ಯದ ಮತದಾರರು ತಿರಸ್ಕರಿಸಿದ್ದಾರೆ.
ಲಾಲೂ ಅವರ ನೇತೃತ್ವದಲ್ಲಿ 1997ರಲ್ಲಿ ಅಸ್ತಿತ್ವಕ್ಕೆ ಬಂದ ಆರ್‌ಜೆಡಿ, ಒಂದು ಕಾಲದಲ್ಲಿ ಕೇಂದ್ರದಲ್ಲಿ ಸರ್ಕಾರದ ರಚನೆಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸುತ್ತಿತ್ತು. ಆದರೆ, ಈ ಬಾರಿ ಸಂಸತ್‌ನಲ್ಲಿ ಪಕ್ಷದ ಪರ ಧ್ವನಿ ಎತ್ತಲು ಒಬ್ಬನೇ ಒಬ್ಬ ಸಂಸದ ಇಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ನಾಲ್ವರು ಸಂಸದರು ಆರಿಸಿ ಬಂದಿದ್ದರು. ಜಾತಿ ಆಧಾರಿತ ಲೆಕ್ಕಾಚಾರ ಹೊಂದಿದ್ದ ಪಕ್ಷ, ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಜೊತೆಗೆ, ಆರ್‌ಎಲ್‌ಎಸ್‌ಪಿ, ಎಚ್‌ಎಎಮ್, ವಿಐಪಿ ಸೇರಿದಂತೆ ಇತರ ಸಣ್ಣ ಪುಟ್ಟ ಪಕ್ಷಗಳಿಗೆ ಸೀಟುಗಳನ್ನು ಬಿಟ್ಟು ಕೊಟ್ಟಿತ್ತು.
ಆದರೆ, ಈ ಬಾರಿ ಅದರ ಜಾತಿ ಆಧಾರಿತ ರಾಜಕೀಯ ಲೆಕ್ಕಾಚಾರಗಳೆಲ್ಲಾ ಪೂರ್ತಿ ತಲೆಕೆಳಗಾಗಿವೆ. ಪಾಟಲಿಪುತ್ರದಲ್ಲಿ ಸ್ಪರ್ಧಿಸಿದ್ದ ಲಾಲೂ ಪುತ್ರಿ ಮಿಸಾ ಭಾರತಿಯವರೇ ಸೋಲು ಕಂಡಿದ್ದಾರೆ. ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡರೂ, ಪ್ರತಿಸ್ಪರ್ಧಿ, ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಎದುರು ಸೋಲಿನ ರುಚಿ ಕಾಣಬೇಕಾಯಿತು. ಆರ್‌ಜೆಡಿಗೆ ಮರಳಿ ಬಂದು, ಮಾಧೇಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಸಹ ಸೋಲು ಕಂಡರು.
ಈ ಕ್ಷೇತ್ರದಲ್ಲಿ ಯಾದವ್ ಸಮುದಾಯದ ಮತಗಳು ಹೆಚ್ಚಿವೆ ಎಂಬುದು ವಿಶೇಷ. ಇದೇ ವೇಳೆ, ಸರಣ್ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಮಾವ, ಚಂದ್ರಿಕಾ ರಾಯ್ ಕೂಡ ಸೋತು ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಡಿದರು.
ಪಕ್ಷದ ಪ್ರಮುಖರ ಸೋಲು: ಅಷ್ಟೇ ಅಲ್ಲ, ಆರ್‌ಜೆಡಿಯ ಪ್ರಮುಖ ನಾಯಕರಾದ ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್, ಮುಸ್ಲಿಂ ಸಮುದಾಯದ ಪ್ರಮುಖ ನಾಯಕ ಅಬ್ದುಲ್ ಬಾರಿ ಸಿದ್ಧಿಕಿ ಹಾಗೂ ಹಿರಿಯ ನಾಯಕ ಜಯಪ್ರಕಾಶ್ ನಾರಾಯಣ ಯಾದವ್ ಕೂಡ ಸೋಲು ಕಂಡರು. ಮುಸ್ಲಿಂ ಮತಗಳ ಬಾಹುಳ್ಯವುಳ್ಳ ಅರಾರಿಯಾ, ಪೂರ್ನಿಯಾ, ಕತಿಹಾರ್‌ನಂತಹ ಕ್ಷೇತ್ರಗಳಲ್ಲಿಯೇ ಪಕ್ಷ ದಯನೀಯ ಸೋಲು ಕಂಡಿದೆ.
ಮೇವು, ಭ್ರಷ್ಟಾಚಾರ ಹಗರಣಗಳ ಮೇಲಿನ ಆರೋಪದಿಂದಾಗಿ ಜೈಲು ಸೇರಿರುವ ಲಾಲೂ ಪ್ರಸಾದ್ ಯಾದವ್‌ಗೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಅವರ ಪುತ್ರ ತೇಜಸ್ವಿ ಜನರನ್ನು ತಲುಪುವಲ್ಲಿ ವಿಫಲರಾದರು. ಬಿಜೆಪಿ, ಕೇವಲ ಮೇಲ್ವರ್ಗದವರ ಪಕ್ಷ ಎಂಬುದನ್ನು ಎತ್ತಿ ತೋರಿಸುವ ಸಲುವಾಗಿ “ಮೀಸಲಾತಿ’ ವಿಷಯವನ್ನೇ ದೊಡ್ಡದಾಗಿ ಬಿಂಬಿಸಿದರು. ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರದ ನೀತಿಯನ್ನು ಬಹಿರಂಗವಾಗಿ ವಿರೋಧಿಸಿದರು. ಇದು ಪಕ್ಷಕ್ಕೆ ಮುಳುವಾಯಿತು.