ಪಾಟ್ನಾ:ಬಿಹಾರ ಮೊದಲ ಹಂತದ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಹಲವೆಡೆ ಇವಿಎಂ ದೋಷದಿಂದಾಗಿ ಜನರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬುಧವಾರ(ಅಕ್ಟೋಬರ್ 28, 2020) ನಡೆದಿದೆ. ಬೆಳಗ್ಗೆ 11ಗಂಟೆವರೆಗೆ ಶೇ.18ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶ ತಿಳಿಸಿದೆ.
ಜಾಮುಯಿ ಕ್ಷೇತ್ರದ 55 ಮತಗಟ್ಟೆಯಲ್ಲಿನ ಮತದಾನವನ್ನು ರದ್ದುಪಡಿಸುವಂತೆ ಆರ್ ಜೆಡಿ ಅಭ್ಯರ್ಥಿ ವಿಜಯ್ ಪ್ರಕಾಶ್ ಆಗ್ರಹಿಸಿದ್ದಾರೆ. 55 ಮತಟ್ಟೆಗಳಲ್ಲಿನ ಇವಿಎಂ ಯಂತ್ರಗಳ ಸಮಸ್ಯೆಯಿಂದಾಗಿ ಅದನ್ನು ಬದಲಾಯಿಸಲಾಗಿದೆ. ಕೇಂದ್ರ ಮತ್ತು ಬಿಜೆಪಿ ವಿರುದ್ಧ ವಿಜಯ್ ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ ಇಂದು 71 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 2.15 ಕೋಟಿ ಮತದಾರರು ಮತ ಚಲಾಯಿಸುವ ಮೂಲಕ 1000ಕ್ಕೂ ಅಧಿಕ ಅಭ್ಯರ್ತಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಇದನ್ನೂ ಓದಿ:ಅಕ್ಟೋಬರ್ 31ರಂದು ಬಾನಂಗಳದಲ್ಲಿ “ನೀಲಿ ಚಂದ್ರನ” ವಿಸ್ಮಯ: ಏನಿದು ಹಂಟರ್ ಮೂನ್?
“ಉದ್ಯೋಗ ಮತ್ತು ರೈತರು, ಕಾರ್ಮಿಕರಿಗೆ” ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಹಾರದ ಜನತೆ ಮಹಾಘಟಬಂಧನ್ ಗೆ ಮತ ಚಲಾಯಿಸುವಂತೆ ರಾಹುಲ್ ಗಾಂಧಿ ಬುಧವಾರ(ಅಕ್ಟೋಬರ್ 28, 2020) ಟ್ವೀಟ್ ಮಾಡಿದ್ದು, ಈ ಬಗ್ಗೆ ಬಿಜೆಪಿ ಚುನಾವಣಾ ಅಯೋಗದ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.