ಬೆಂಗಳೂರು: ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಅವರಿಗೆ ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್, ನಾಮನಿರ್ದೇಶನ ಶಾಸಕಿ ವಿನೀಶಾ ನೀರೊ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಸಾಥ್ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಚರ್ಚ್, ಮಸೀದಿ, ಗಣಪತಿ ದೇವಸ್ಥಾನ ಹಾಗೂ ಚೀಮಸಂದ್ರ ಗ್ರಾಮದ ಬಸವೇಶ್ವರ ದೇವಾಲಯಗಳಿಗೆ ತೆರಳಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಿಜ್ವಾನ್ ಅರ್ಷದ್, ಬೆಂಗಳೂರಿನಂತಹ ಅಂತಾರಾಷ್ಟ್ರೀಯ ನಗರಕ್ಕೆ ಉತ್ತಮ ಜನಪ್ರತಿನಿಧಿ ಬೇಕು. ಕಳೆದ ಐದು ವರ್ಷದಲ್ಲಿ ನಗರ ಹಾಗೂ ಕ್ಷೇತ್ರಕ್ಕೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರ ಕೊಡುಗೆ ಏನು? ಬೆಂಗಳೂರಿನ ಸಮಸ್ಯೆ ಬಗ್ಗೆ ಸಂಸದರು ಸಂಸತ್ತಿನಲ್ಲಿ ಏನಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನರಿಗೆ ಸಾಕಷ್ಟು ನಿರೀಕ್ಷೆಗಳಿದ್ದು, ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ಮೇಲಿದೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ ಎಂದರು.
ಅನಾರೋಗ್ಯ ಕಾರಣದಿಂದ ಮಾಜಿ ಸಚಿವ ರೋಷನ್ ಬೇಗ್ ಅವರು ನಾಮಪತ್ರ ಸಲ್ಲಿಕೆಗೆ ಬಂದಿಲ್ಲ. ಅವರೂ ಸಮರ್ಥ ನಾಯಕರಾಗಿದ್ದು, ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ತೀರ್ಮಾನವನ್ನು ಗೌರವಿಸಿ, ಚುನಾವಣೆಯಲ್ಲಿ ನನಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.