Advertisement

ಅಚ್ಚುಕಟ್ಟು ಕೊನೆ ಭಾಗದ ಕೆರೆಗೆ ನದಿ ನೀರು

12:30 PM Aug 17, 2017 | |

ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಭಾಗಗಳಿಗೆ ಎದುರಾಗಿರುವ ನೀರಿನ ಸಮಸ್ಯೆ ನೀಗಿಸಲು ಆ ಭಾಗದ ಕೆರೆಗಳಿಗೆ ನದಿಯಿಂದ ನೇರವಾಗಿ ನೀರು ಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಭರವಸೆ ನೀಡಿದ್ದಾರೆ.

Advertisement

ಬುಧವಾರ, ಬಿ. ಕಲ್ಪನಹಳ್ಳಿಯ ಶರಣ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ
ರೈತರ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರಿಗೆ ನೀರಿನ ಸಮಸ್ಯೆ ನಿರಂತರವಾಗಿ ಎದುರಾಗುತ್ತಿದೆ. ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪರ್ಯಾಯ ಯೋಚನೆ ಮಾಡಲಾಗಿದೆ. ಅದರಂತೆ ಈ ಭಾಗದಲ್ಲಿ ಬರುವ ಕಾಡಜ್ಜಿ,
ಮಾಗಾನಹಳ್ಳಿ, ಬೇತೂರು, ರಾಂಪುರ, ಹಿರೇಮೇಗಳಗೆರೆ ಗ್ರಾಮದ ಕೆರೆಗಳಿಗೆ ನೇರ ನದಿಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕಿದೆ. ಚುನಾವಣೆಗೂ ಮುನ್ನವೇ ಈ ಯೋಜನೆ ಅನುಮೋದನೆಗೆ ಪ್ರಯತ್ನಿಸುವೆ ಎಂದರು.

ಮಳೆ ಪ್ರಮಾಣ ಕಡಮೆ ಆಗುತ್ತಿರುವುದರಿಂದ ನಿರಂತರವಾಗಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಭದ್ರ ಜಲಾಶಯ ಇದುವರೆಗೆ ತುಂಬಿಲ್ಲ. ಈಗ ಇರುವ ನೀರಿನ ಪ್ರಮಾಣ  ನೋಡಿದರೆ ಅದು ಕುಡಿಯಲು ಮಾತ್ರ ಬಳಕೆಮಾಡಿಕೊಳ್ಳಬಹುದು. ಬೆಳೆಗೆ ನೀರು ಕೊಡುವುದು ಅನುಮಾನ. ಇಂತಹ ಸಂದರ್ಭದಲ್ಲಿ ಕೆರೆಗಳಿಗೆ ನೀರು ಹರಿಸಿದರೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ರೈತರ ಕೃಷಿ ಚಟುವಟಿಕೆಗೂ ಒಂದಿಷ್ಟು ನೀರು ಸಿಕ್ಕಂತೆ ಆಗುತ್ತದೆ. ಜೊತೆಗೆ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.

ದೀಟೂರು ಬಳಿ ಜಾಕ್‌ವೆಲ್‌ ನಿರ್ಮಿಸಿ, ನೇರ ಕೊಂಡಜ್ಜಿ ಗುಡ್ಡಕ್ಕೆ ನೀರೆತ್ತಿ, ಅಲ್ಲಿಂದ ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. 100-150 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಬೇಕಿದೆ. ನೀರಾವರಿ ಸಚಿವ ಎಂ.ಪಿ. ಪಾಟೀಲ್‌ ವಿದೇಶ ಪ್ರವಾಸದಲ್ಲಿದ್ದು, ವಾಪಸ್‌ ಬರುತ್ತಲೇ ಈ ಯೋಜನೆ ಕುರಿತು ಮಾತುಕತೆ ನಡೆಸುವೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವೆ ಎಂದು ಅವರು ಭರವಸೆ ನೀಡಿದರು.

ಹಾಗೆ ನೋಡಿದರೆ ಈ ಕೆರೆಗಳಿಗೆ ನೇರ ನದಿಯಿಂದ ನೀರು ತುಂಬಿಸುವ ಯೋಜನೆ ಮುಂಚೆಯೇ ಜಾರಿಯಾಗಬೇಕಿತ್ತು. ಆದರೆ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ ಹಾಗೆ ಈಗ ನಾವು ಯತ್ನಿಸುತ್ತಿದ್ದೇವೆ. ಸದ್ಯ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಮಳೆ ಪ್ರಮಾಣ ತೀರಾ ಕಡಮೆ ಆಗಿದೆ. 661 ಮಿಮೀ ಮಳೆಯಾಗಬೇಕಿದ್ದ ಜಾಗದಲ್ಲಿ 221 ಮಿಮೀ ಮಾತ್ರ ದಾಖಲಾಗಿದೆ. ಕಳೆದ 3 ವರ್ಷದಿಂದ ಮಳೆ ಆಗಿಯೇ ಇಲ್ಲ. ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಎಂದು ಅವರು ಹೇಳಿದರು.

Advertisement

ಇದಕ್ಕೂ ಮುನ್ನ ಮಾತನಾಡಿದ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಪಾಟೀಲ್‌, ಭದ್ರಾ ಜಲಾಶಯದ ನಿರ್ಮಾಣ ಮಾಡಿದ್ದೇ ಅರೆ ನೀರಾವರಿ ಬೆಳೆಗೆ ನೀರು ಕೊಡಬೇಕೆಂಬ ಉದ್ದೇಶದಿಂದ. ಆಗ ಎತ್ತರದಲ್ಲಿದ್ದ ಕೆಲ ಭೂ ಪ್ರದೇಶ ಇದೀಗ ತಂತ್ರಜ್ಞಾನದ ಸಹಾಯದಿಂದ
ಸಮತಟ್ಟುಕೊಂಡು ನೀರಾವರಿ ವ್ಯಾಪ್ತಿಗೆ ಬಂದಿದೆ. ಇದರಿಂದ ಅಚ್ಚುಕಟ್ಟು ಪ್ರದೇಶ ಇಳಿಕೆಯಾಯಿತು. ಇದೇ ಕಾರಣಕ್ಕೆ ಪರ್ಯಾಯ ಯೋಜನೆ ಮಾಡಲಾಗುತ್ತಿದೆ. ಈ ಭಾಗದ ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿದ್ದು 200ಎಂಸಿ ಎಫ್‌ಟಿ ನೀರು ನದಿಯಿಂದ ತರಬಹುದಾಗಿದೆ ಎಂದರು.

ರೈತ ಮುಖಂಡ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಜಿಪಂ ಸದಸ್ಯೆ ರೇಣುಕಮ್ಮ, ದೂಡಾ ಅಧ್ಯಕ್ಷ ಎಚ್‌.ಜಿ. ರಾಮಚಂದ್ರಪ್ಪ, ಮುಖಂಡರಾದ ಕೆ.ಎನ್‌. ಸೋಮಶೇಖರಪ್ಪ, ಪರುಶುರಾಮ, ಎಚ್‌. ನಾಗಪ್ಪ, ರಾಘವೇಂದ್ರ ನಾಯ್ಕ, ಕೆ.ಟಿ. ದ್ಯಾಮಪ್ಪ, ಬಿ. ಪ್ರಭು, ಎಚ್‌.ಬಿ. ಬಸವರಾಜಪ್ಪ, ವಿವಿಧ ರೈತ ಮುಖಂಡರು,  ಹರಪನಹಳ್ಳಿ ತಾಲ್ಲೂಕಿನ ಭದ್ರ ಅಚುrಕಟ್ಟು ಪ್ರದೇಶದ ಕೊನೆಭಾಗದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

22 ಕೆರೆಗಳಿಗೆ ನೀರು ಹರಿಯುತ್ತಲೇ ಇರ್ಲಿಲ್ಲ..
ವಾಸ್ತವದಲ್ಲಿ 22 ಕೆರೆ ಏತ ನೀರಾವರಿ ಯೋಜನೆಯಡಿ ಯಾವುದೇ ಕೆರೆಗೆ ನೀರು ಹರಿಯುತ್ತಲೇ ಇರಲಿಲ್ಲ. ಇದಕ್ಕೆ ಕಾರಣ ನದಿ ಬಳಿಯ ಜಾಕ್‌ವೆಲ್‌ ನಿರ್ಮಾಣ ಮಾಡಿದ ರೀತಿ. ನದಿಯ ಮಟ್ಟದಿಂದ 3 ಮೀಟರ್‌ ಎತ್ತರಕ್ಕೆ ಜಾಕ್‌ವೆಲ್‌ ನಿರ್ಮಿಸಲಾಗಿದೆ. ಇದರಿಂದ ನದಿಯಿಂದ ನೀರು  ರಿಯುವುದು ಸಾಧ್ಯವಿಲ್ಲವಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಸರಿಯಾಗಿ 30 ದಿನ ಸಹ ನದಿಗೆ ನೀರು ಹರಿದಿರಲಿಲ್ಲ. ಈ ಬಾರಿ ಪಂಪ್‌ಸೆಟ್‌ ಬಳಸಿ, ನೀರು ಹರಿಸಲಾಗುತ್ತಿದೆ. 
ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next