Advertisement

ಬತ್ತುತ್ತಿದೆ ಗಂಗಾವಳಿ ನದಿ; ಗೋಕರ್ಣ-ಕುಮಟಾಕ್ಕೆ ಹೆಚ್ಚುತ್ತಿದೆ ಜಲಕ್ಷಾಮ ಭೀತಿ…

05:37 PM Mar 30, 2024 | Team Udayavani |

ಉದಯವಾಣಿ ಸಮಾಚಾರ
ಗೋಕರ್ಣ: ದಿನೇ ದಿನೇ ಬಿಸಿಲು ಹೆಚ್ಚುತ್ತಿದ್ದು ನದಿಗಳಲ್ಲೂ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಇಲ್ಲಿಯ
ಗಂಗಾವಳಿ ನದಿಯಿಂದ (ಮರಾಕಲ್‌ ಯೋಜನೆ) ಗೋಕರ್ಣದ ಹಲವು ಗ್ರಾಮ ಪಂಚಾಯತ್ ಹಾಗೂ ಕುಮಟಾಕ್ಕೆ ನೀರು ಪೂರೈಕೆಯಾಗುತ್ತಿದ್ದು ಈಗ ಗಂಗಾವಳಿ ನದಿ ನೀರಿನ ಮಟ್ಟ ಅಧಿಕ ಪ್ರಮಾಣದಲ್ಲಿ ತಗ್ಗಿದ್ದರಿಂದಾಗಿ ನೀರು ಪೂರೈಕೆ ಕಷ್ಟವಾಗಿದೆ. ಹೀಗಾಗಿ ಸಹಜವಾಗಿಯೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ತಲೆದೋರಿದೆ.

Advertisement

ಮರಾಕಲ್‌ ಯೋಜನೆ ಮೂಲಕ ಗೋಕರ್ಣ, ಹನೇಹಳ್ಳಿ, ನಾಡುಮಾಸ್ಕೇರಿ, ತೊರ್ಕೆ, ಸಗಡಗೇರಿ ಗ್ರಾ.ಪಂ.ವ್ಯಾಪ್ತಿಯ ಮನೆ ಮನೆಗಳಿಗೆ ನಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ನೀರು ಹರಿಸುವುದರ ಜತೆಗೆ ಕುಮಟಾಕ್ಕೂ ಇಲ್ಲಿಂದಲೇ ನೀರು ಪೂರೈಸಲಾಗುತ್ತಿತ್ತು . ಆದರೆ ಗಂಗಾವಳಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಕಡಿಮೆಯಾಗಿದ್ದು ಜಲಕ್ಷಾಮ ಆವರಿಸಿದೆ.

ಒಂದೆಡೆ ನೀರು ಸರಿಯಾಗಿ ಸರಬರಾಜು ಮಾಡಲಾಗುತ್ತಿಲ್ಲ. ಮತ್ತೊಂದೆಡೆ ನೀರು ಹರಿಸಲು ಅಳವಡಿಸಲಾದ ಪೈಪ್‌
ಗಳು ಕೂಡ ಒಡೆದು ನೀರು ಸೋರಿಕೆಯಾಗುತ್ತಿದೆ. ಸಾವಿರಾರು ಮನೆಗಳಿಗೆ ಈ ಯೋಜನೆ ಮೂಲಕ ನೀರನ್ನು ಸಾಗಿಸಲಾಗುತ್ತಿದೆ. ಆದರೆ ಅವಧಿಗೂ ಮುನ್ನವೇ ನೀರಿನ ಕ್ಷಾಮ ಉಂಟಾಗಿದ್ದರಿಂದ ಜನ ಆತಂಕಗೊಂಡಿದ್ದಾರೆ.ಏಪ್ರಿಲ್‌, ಮೇ ತಿಂಗಳಲ್ಲಿ ಕುಡಿಯುವ ನೀರಿಗಾಗಿ ಹರಸಾಹಸ ಪಡಬೇಕಾದ ದಿನ ದೂರ ಇಲ್ಲ ಎಂಬ ಸ್ಥಿತಿ ಉಂಟಾಗಿದೆ.

ಅಕ್ರಮ ಬಂಡ್‌-ಪಂಪ್‌: ಗಂಗಾವಳಿ ನದಿ ನೀರು ಒಂದೆಡೆ ತೀವ್ರ ಕೆಳಮಟ್ಟಕ್ಕೆ ಕುಸಿದಿದ್ದರೆ, ನದಿ ನೀರನ್ನು ಆಶ್ರಯಿಸಿ ತೋಟ ಗದ್ದೆ ಮಾಡಿದವರು ಅನಿವಾರ್ಯವಾಗಿ ಉಸುಕಿನ ಚೀಲ ಹಾಕಿ ಬಂಡ್‌ ನಿರ್ಮಿಸಿ ನೀರನ್ನು ಹಳ್ಳದಲ್ಲಿಯೇ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಇನ್ನು ಕೆಲವೆಡೆ ಅನಧಿಕೃತವಾಗಿ ಪಂಪ್‌ಗಳನ್ನು ನದಿಗೆ ಅಳವಡಿಸಿ ನೀರನ್ನು ಮೇಲೆತ್ತಲಾಗುತ್ತಿದ್ದು ನದಿ ಒಡಲು ಬರಿದಾಗುತ್ತಿದೆ.

ಇಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಸ್ಥಳೀಯರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಶಿವರಾಮ ನಾಯ್ಕ ಅವರ ಗಮನಕ್ಕೆ ತಂದಿದ್ದು, ಅವರು ಕೂಡ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನೀರಿನ ಕೊರತೆ ಎಲ್ಲೆಡೆ ಕಂಡುಬರುತ್ತಿದ್ದು, ಗಂಗಾವಳಿ ನದಿಯನ್ನೇ ನಂಬಿ ತೋಟ ಮಾಡಿದವರ ಪರಿಸ್ಥಿತಿ ನಿಜಕ್ಕೂ ದುಸ್ತರವಾಗಿದೆ.

Advertisement

ಗಂಗಾವಳಿ ನದಿ ಬತ್ತುತ್ತಿರುವುದರಿಂದ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೇ ಅಳಿದುಳಿದ ನೀರನ್ನು ತಡೆದು ಉಸುಕಿನ ಚೀಲ ಮತ್ತು ಅಳವಡಿಸಲಾದ ಪಂಪ್‌ ಅನ್ನು ತೆರವುಗೊಳಿಸಲು ಈಗಾಗಲೇ ಸಂಬಂಧಪಟ್ಟ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಲಾಗಿದೆ.
*ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ ಕಾರವಾರ

*ನಾಗರಾಜ ಎಂ.

Advertisement

Udayavani is now on Telegram. Click here to join our channel and stay updated with the latest news.

Next