Advertisement
ವಿಶ್ವಕರ್ಮ ಸಮಾಜದ ಶ್ರಮಜೀವಿಗಳಾದ ಕಮ್ಮಾರ ಕೆಲಸಗಾರರು ಇದೀಗ ಆಪರೂಪವಾಗುತ್ತಿದ್ದಾರೆ. ತಮ್ಮ ಮನೆ ಪಕ್ಕದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ಇದರೊಳಗೆ ಕಷ್ಟಕರವಾದ ಕಬ್ಬಿಣದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹಾರೆ, ಪಿಕ್ಕಾಸು, ಕತ್ತಿ, ಮಚ್ಚು, ಸಬಳ, ಕೊಡಲಿ ಮುಂತಾದ ವಸ್ತುಗಳನ್ನು ಬೆಂಕಿಯಲ್ಲಿ ಕಾಯಿಸಿ ಹದಗೊಳಿಸುತ್ತಿದ್ದಾರೆ.
ಪರಂಪರಾಗತವಾಗಿ ತಂದೆಯಿಂದ ಮಗನಿಗೆ ಬಳುವಳಿಯಾಗಿ ಬಂದ ಕುಲ ಕಸುಬುದಾರರ ಮಕ್ಕಳು ಇದನ್ನು ಮುಂದುವರಿಸಲು ಸಿದ್ಧರಿಲ್ಲ. ಶಿಕ್ಷಣ ಪಡೆದು ಉದ್ಯೋಗಕ್ಕೆ ತೆರಳುವುದರಿಂದ ಈ ಕೆಲಸ ಮುಂದುವರಿಯಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ಕಳೆದ 30 ವರ್ಷಗಳಿಂದ ಪೆರ್ಮುದೆಯಲ್ಲಿ ಕಮ್ಮಾರ ಕೆಲಸ ನಡೆಸುತ್ತಿರುವ ನಾಗೇಶ ಆಚಾರಿಯವರದು. ಇವರ ಅಪ್ಪ ಹಲವು ವರ್ಷಗಳ ಕಾಲ ಕಮ್ಮಾರ ವೃತ್ತಿಯಲ್ಲಿ ನಿರತರಾಗಿದ್ದು ಬಳಿಕ ಬಡಗಿಯಾಗಿದ್ದ ಇವರ ಪುತ್ರ ನಾಗೇಶ ಆಚಾರಿಯವರು ಉತ್ತರಾಧಿಕಾರಿಯಾಗಿ ಅಪ್ಪನ ಕೆಲಸವನ್ನು ಮುಂದುವರಿಸುತ್ತಿದ್ದಾರೆ.ಇವರ ಮಕ್ಕಳು ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಬಳಿಕ ಇದನ್ನು ಮುಂದುವರಿಸುವವರಿಲ್ಲವೆಂಬ ಕೊರಗು ಇವರದು. ಬೇಸಗೆಯಲ್ಲಿ ಬೆಂಕಿ ಮುಂದೆ ಕುಳಿತು ಮಾಡುವ ಈ ತ್ರಾಸದಾಯಕ ಕೆಲಸ ಆರೋಗ್ಯಕ್ಕೂ ಮಾರಕವಾಗಿದೆ.
Related Articles
Advertisement
ಹಿಂದಿನ ಕಾಲದಲ್ಲಿ ಮನೆ ಇನ್ನಿತರ ಕಟ್ಟಡಗಳನ್ನು ನಿರ್ಮಿಸುವಾಗ ಹಾರೆ, ಪಿಕ್ಕಾಸುಗಳ ಮೂಲಕವೇ ಅಗೆದು ಅಡಿಪಾಯ ನಿರ್ಮಿಸಲಾಗುತ್ತಿತ್ತು.ಎತ್ತರದ ಬರೆಯನ್ನು ಅಗೆದು ತೆಗೆಯಲಾಗುತ್ತಿತ್ತು.ಬಳಿಕ ಕೂಲಿಯಾಳುಗಳ ಕೊರತೆಗೆ ಪರ್ಯಾಯವಾಗಿ ಜೆ.ಸಿ.ಬಿ.ಕಂಪೆÅಸರ್ ಇನ್ನಿತರ ಯಂತ್ರಗಳ ಬಳಕೆ ಆರಂಭಗೊಂಡಿತು. ಆದುದರಿಂದ ಹಾರೆ,ಪಿಕ್ಕಾಸುಗಳ ಬಳಕೆ ಪ್ರಕೃತ ದೂರವಾಗುತ್ತಿದೆ.ಇದೀಗ ಕಲ್ಲು ಕಡಿಯಲು ಯಂತ್ರ, ಕಡಿದಕಲ್ಲುಗಳನ್ನು ಎತ್ತಿ ಇರಿಸಲು ಯಂತ್ರಗಳನ್ನು ಕೂಡ ಬಳಸಲಾಗುತ್ತಿದೆ. ಇದರಿಂದಲಾಗಿ ಕಲ್ಲು ಕಡಿಯುವ ಮತ್ತು ಕಲ್ಲು ಎಳಕಿಸುವ ಮಚ್ಚು ಮತ್ತು ಹಾರೆ ಪಿಕ್ಕಾಸುಗಳ ಬಳಕೆ ವಿರಳವಾಗಿದೆ. ಇದರಿಂದ ಕಮ್ಮಾರರಿಗೆ ಇದರ ಕೆಲಸವಿಲ್ಲದಾಗಿದೆ. ಕಮ್ಮಾರರು ಮಾಡುವ ಕೆಲವು ಕೆಲಸಗಳೂ ಯಂತ್ರದ ಮೂಲಕ ನಡೆಯುತ್ತಿವೆ.
– ಅಚ್ಯುತ ಚೇವಾರ್