ಬಂಟ್ವಾಳ: ಬಿ.ಸಿ.ರೋಡ್–ಜಕ್ರಿಬೆಟ್ಟು ಹೆದ್ದಾರಿಯಿಂದ ಬಂಟ್ವಾಳ ಪೇಟೆಯನ್ನು ಸಂಪರ್ಕಿಸುವ ಮಿತ್ತಗಿರಿ ರಸ್ತೆಯಲ್ಲಿ ಎಂಆರ್ ಪಿಎಲ್‌ನವರು ಪೈಪ್‌ಲೈನ್ ಕಾಮಗಾರಿ ನಡೆಸಿ ಮ್ಯಾನ್ ಹೋಲ್‌ನಂತಹುದೊಂದಕ್ಕೆ ಸ್ಲ್ಯಾಬ್ ಅಳವಡಿಸದೆ ಹಾಗೇ ಬಿಟ್ಟಿದ್ದು, ಇದೀಗ ಆ ಹೊಂಡವು ಅಪಾಯಕಾರಿ ಯಾಗಿ ಪರಿಣಮಿಸಿದೆ.
ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಎಂಆರ್ ಪಿಎಲ್‌ಗೆ ನೀರು ಸಾಗಿಸುವ ಪೈಪ್‌ಲೈನನ್ನು ಶಿಫ್ಟ್ ಮಾಡಲಾಗಿದ್ದು, ಎಂಆರ್ ಪಿಎಲ್‌ನವರೇ ಅದರ ಕಾಮಗಾರಿಯನ್ನು ನಿರ್ವಹಿಸಿದ್ದರು. ಆ ಸಂದರ್ಭ ಮಿತ್ತಗಿರಿ ಭಾಗದಲ್ಲಿ ಹೆದ್ದಾರಿಯ ಮಳೆ ನೀರು ಹರಿಯುವ ಚರಂಡಿಗಿಂತ ತಳಭಾಗದಲ್ಲಿ ಎಂಆರ್‌ಪಿಎಲ್‌ನವರ ಪೈಪ್‌ಲೈನ್ ಹಾದುಹೋಗಿರುವ ಭಾಗದಲ್ಲಿ ಮ್ಯಾನ್ ಹೋಲ್‌ನಂತಹ ಹೊಂಡವನ್ನು ಮುಚ್ಚದೆ ಹಾಗೇ ಬಿಟ್ಟಿದ್ದಾರೆ.
ಮಿತ್ತಗಿರಿಯಲ್ಲಿ ಹೆದ್ದಾರಿಯಿಂದ ಕೆಳಕ್ಕೆ ಇಳಿಯುವಲ್ಲಿಯೇ ಈ ಹೊಂಡವಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಹೊಂಡಕ್ಕೆ ಬೀಳುವ ಅಪಾಯವಿದೆ. ರಾತ್ರಿ ವೇಳೆಯಂತೂ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಈ ಭಾಗದಲ್ಲಿ ಮಕ್ಕಳು, ಜಾನುವಾರುಗಳು ಕೂಡ ಓಡಾಟ ನಡೆಸುತ್ತಿದ್ದು, ಅರಿವಿಗೆ ಬಾರದೇ ಹೊಂಡಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
ಯಾವುದೇ ಸ್ಪಂದನೆ ಇಲ್ಲ
ಹೊಂಡದಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅದನ್ನು ಮುಚ್ಚುವಂತೆ ಈಗಾಗಲೇ ಹಲವು ಬಾರಿ ಎಂಆರ್‌ಪಿಎಲ್‌ನ ಸಂಬಂಧಪಟ್ಟ ಎಂಜಿನಿಯರ್‌ಗೆ ಮನವಿ ಮಾಡಿದ್ದು, ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿರುತ್ತಾರೆ. ಹೀಗಾಗಿ ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮುನ್ನ ಹೊಂಡವನ್ನು ಮುಚ್ಚುವುದಕ್ಕೆ ಕ್ರಮಕೈಗೊಳ್ಳಬೇಕಿದೆ.