Advertisement
ಜನ ಸಾಂದ್ರತೆ ಮತ್ತು ವ್ಯವಹಾರ ಚಟುವಟಿಕೆಗಳು ಹೆಚ್ಚಾಗಿರುವ ಮಂಗಳೂರಿನಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವುದು ಆತಂಕದ ವಿಚಾರ. ಜಿಲ್ಲಾಡಳಿತವು ತತ್‌ಕ್ಷಣವೇ ಎಚ್ಚೆತ್ತುಕೊಂಡು ಕಠಿನ ಕ್ರಮಗಳನ್ನು ಜಾರಿಗೊಳಿಸದೆ ಹೋದರೆ ಪರಸ್ಥಿತಿ ಕೈಮೀರುವ ಅಪಾಯವಿದೆ.ಲಾಕ್‌ಡೌನ್ ಜಾರಿಯಲ್ಲಿದ್ದರೂ ಮಂಗಳೂರಿನಲ್ಲಿ ಬಹುತೇಕ ಜನರು ಅನಗತ್ಯವಾಗಿ, ಸಾಮಾಜಿಕ ಅಂತರ ಕಾಯದೆ ತಿರುಗಾಡುತ್ತಿರುವುದು ಎಲ್ಲೆಂದರಲ್ಲಿ ಕಾಣುತ್ತಿತ್ತು. ಈಗ ಮೂರು ಪ್ರಕರಣಗಳು ನಗರದೊಳಗೆ ದೃಢವಾದ ಬಳಿಕವೂ ಲಾಕ್‌ಡೌನ್ ಪಾಲನೆಗೆ ಗಮನ ನೀಡಿದಂತೆ ಕಾಣುತ್ತಿಲ್ಲ.
ಬೋಳೂರಿನ 58ರ ಹರೆಯದ ಮಹಿಳೆ ಇತ್ತೀಚೆಗೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಮಹಿಳೆ ಮತ್ತು ಕುಟುಂಬದವರ ಸಂಪರ್ಕ ಹೊಂದಿದವರನ್ನು ಪತ್ತೆ ಕಾರ್ಯ ನಡೆಸಲಾಗುತ್ತಿದೆ.ಈ ಮನೆ ಮಂದಿ ಇತ್ತೀಚೆಗೆ ನಗರದ ಹಲವೆಡೆ ಹೋಗಿ ಬಂದಿರುವ ಮಾಹಿತಿಯೂ ಇದೆ. ಡಿಸ್ಚಾರ್ಜ್ ಆದವರ ಮೇಲೆ ನಿಗಾ
ಮನಪಾ ವ್ಯಾಪ್ತಿಯಲ್ಲಿ ದೃಢಪಟ್ಟ 3 ಕೋವಿಡ್-19 ಪ್ರಕರಣಗಳು ಫಸ್ಟ್ ನ್ಯೂರೋ ಆಸ್ಪತ್ರೆಯ ಮೂಲದಿಂದಲೇ ಬಂದಿವೆ. ಈ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡವರ ಪಟ್ಟಿಯನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದು, ಅದರಲ್ಲಿ ಮನಪಾ ವ್ಯಾಪ್ತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ, ಫಸ್ಟ್ ನ್ಯೂರೊ ಆಸ್ಪತ್ರೆ ನಗರಕ್ಕೆ ಹೊಂದಿಕೊಂಡಂತೆಯೇ ಇದೆ. ಸೀಲ್‌ಡೌನ್ ಆಗಿರುವ ಇಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಇದ್ದು, ಅವರಲ್ಲಿ ಕೆಲವರ ಪರೀಕ್ಷಾ ವರದಿಯಷ್ಟೇ ಬಂದಿದೆ. ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಲ್ಲಿ ಹಲವರು ನಗರ ವ್ಯಾಪ್ತಿಯವರು. ಹೀಗಾಗಿ ಫಸ್ಟ್ ನ್ಯೂರೊ ಆಸ್ಪತ್ರೆ ಸಂಪರ್ಕದಿಂದ ಮತ್ತಷ್ಟು ಕೋವಿಡ್-19 ಪ್ರಕರಣಗಳು ದೃಢಪಟ್ಟರೆ ಆಗ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
Related Articles
ಬೋಳೂರಿನ ಬಹುಭಾಗವನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿನ ಜೇಮ್ಸ್ ಡಿ’ಸೋಜಾ ಮನೆಯಿಂದ ಬೋಳೂರು ಹಿಂದೂ ರುದ್ರಭೂಮಿಯ ವರೆಗೆ ಹಾಗೂ ಸುಲ್ತಾನ್ ಬತ್ತೇರಿಯ ಹೊಟೇಲ್ ಬಿ.ಜೆ., ಹೊಟೇಲ್ ಶ್ರೀ ವಿನಾಯಕದಿಂದ ಹಿಂದೂ ರುದ್ರಭೂಮಿಯ ಬೋಳೂರು ಪ್ರವೇಶ ದ್ವಾರದ ವರೆಗಿನ ಪ್ರದೇಶವನ್ನು ಕಂಟೈನ್‌ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಒಟ್ಟು 135 ಮನೆಗಳಿದ್ದು, 12 ಅಂಗಡಿಗಳಿವೆ. ಒಟ್ಟು 640 ಜನರು ವಾಸವಾಗಿದ್ದಾರೆ. ಸ್ಮಾರ್ಟ್ ಸಿಟಿ ಮಂಗಳೂರು ಯೋಜನೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರನ್ನು ಕಂಟೈನ್‌ಮೆಂಟ್ ವ್ಯಾಪ್ತಿಯ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 5 ಕಿ.ಮೀ. ವ್ಯಾಪ್ತಿಯ ಬೋಂದೆಲ್, ಎಂಸಿಎಫ್ ಹಾಗೂ ಬೋಳಾರ ನೇತ್ರಾವತಿ ನದಿ ವರೆಗಿನ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಪಶ್ಚಿಮಕ್ಕೆ ಅರಬ್ಬಿ ಸಮುದ್ರದ 5 ಕಿ.ಮೀ. ವ್ಯಾಪ್ತಿಯೂ ಸೇರಿದೆ.
Advertisement
ಡಿಸ್ಚಾರ್ಜ್ ಆದವರಲ್ಲಿ ಮಂಗಳೂರಿನವರೇ ಅಧಿಕಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಎ.1ರಿಂದ 22ರ ನಡುವೆ ಕೇರಳ ಮತ್ತು ಕರ್ನಾಟಕದ ನಾಲ್ಕು ಜಿಲ್ಲೆಗಳ 79 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅತೀ ಹೆಚ್ಚು ಮಂದಿ ಮಂಗಳೂರು ತಾಲೂಕಿ(29)ನವರು. ಸ್ವಯಂ ಜಾಗೃತಿ ಅಗತ್ಯ
ಲಾಕ್‌ಡೌನ್ ಇನ್ನಷ್ಟು ಕಠಿನಗೊಳಿಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಸ್ವಯಂ ಜಾಗೃತಿ ವಹಿಸಿಕೊಳ್ಳುವುದು ಉತ್ತಮ. ಮನೆಯಲ್ಲಿಯೇ ಇದ್ದು ಎಲ್ಲರ ನೆಮ್ಮದಿ ಆಶಿಸೋಣ. ಈ ನಿಯಮ ಪಾಲನೆಯಾಗದಿದ್ದರೆ ನಗರಕ್ಕೆ ಅಪಾಯವಿದೆ.
-ವೇದವ್ಯಾಸ ಕಾಮತ್, ಶಾಸಕ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಾಮಾಜಿಕ ಅಂತರದ ಶಿಸ್ತು ಮೂಡಲಿ
ಮಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇದೀಗ ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್‌ಡೌನ್ ಇನ್ನಷ್ಟು ಕಠಿನ ಮಾಡುವ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹೆಚ್ಚು ಒತ್ತು ನೀಡಲಿ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,
ಅಯುಕ್ತರು, ಮನಪಾ