ಮುಂಬಯಿ: ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತದ ಬಳಿಕ ವಿಶ್ರಾಂತಿಯಲ್ಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಪಂತ್ ಮತ್ತೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಲು ಕೆಲ ತಿಂಗಳುಗಳೇ ಕಳೆದು ಹೋಗಬಹುದು. ಈ ಬಾರಿಯ ಐಪಿಎಲ್ ನಲ್ಲಿ ಪಂತ್ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ನಲ್ಲಿ ಕ್ಯಾಪ್ಟನ್ ಆಗಿದ್ದ ಪಂತ್, ತನ್ನ ನಾಯಕತ್ವದಿಂದ ತಂಡವನ್ನು ಶ್ರೇಷ್ಠವಾಗಿ ಮುನ್ನೆಡಸುತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ರಿಷಭ್ ಪಂತ್ ಅವರ ಬಗ್ಗೆ ಮಾತನಾಡಿದ್ದಾರೆ.
ತಂಡದಲ್ಲಿ ರಿಷಭ್ ಪಂತ್ ಅವರ ಜಾಗವನ್ನು ತುಂಬುವುದು ಕಷ್ಟ. ಅವರ ಜಾಗದಲ್ಲಿ ಯಾವ ಆಟಗಾರವನ್ನು ಸೇರಿಸಬೇಕೆನ್ನುವುದು ಇನ್ನಷ್ಟೇ ಅಂತಿಮವಾಗಬೇಕಿದೆ. ಅಪಘಾತದ ಬಳಿಕ ಪಂತ್ ಅವರ ಬಳಿ ನಾನು ಅನೇಕ ಬಾರಿ ಮಾತನಾಡಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.
ಪಂತ್ ಅಪಘಾತದಿಂದ ಗಾಯ, ಶಸ್ತ್ರಚಿಕಿತ್ಸೆಯಿಂದ ಜೀವನದ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಪಂತ್ ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ಕನಿಷ್ಠ 2 ವರ್ಷವಾಗಬಹುದು ಎಂದು ಪಿಟಿಐಗೆ ಹೇಳಿದ್ದಾರೆ.
ಸದ್ಯ ಪಂತ್ ಅವರ ಜಾಗಕ್ಕೆ ಅಭಿಷೇಕ್ ಪೊರೆಲ್ ಮತ್ತು ದೇಶೀಯ ಅನುಭವಿ ಆಟಗಾರ ಶೆಲ್ಡನ್ ಜಾಕ್ಸನ್ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್ ವಹಿಸಿಕೊಳ್ಳುವ ಸಾಧ್ಯತೆಯಿದೆ.