Advertisement

ಡೆಲ್ಲಿಯಲ್ಲೊಬ್ಬ ಡಿವಿಲಿಯರ್ಸ್‌

12:10 PM May 19, 2018 | |

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌  ಅಂದರೆ ಸಾಕು ಎದುರಾಳಿ ತಂಡಕ್ಕೆ ಏನೋ ಆತಂಕ, ಭಯ ಕಾಡುತ್ತೆ. ಆದಷ್ಟು ಬೇಗ ಈತನಿಗೆ ಪೆವಿಲಿಯನ್‌ ದಾರಿ ತೋರಿಸಬೇಕು, ಇಲ್ಲದಿದ್ದರೆ ತಮ್ಮ ತಂಡಕ್ಕೆ ಉಳಿಗಾಲವಿಲ್ಲ ಎಂದು ಎದುರಾಳಿ ತಂಡದ ಆಟಗಾರರು ಯೋಚಿಸುತ್ತಾರೆ. ಯಾಕೆಂದರೆ ಎಬಿಡಿ ಕ್ರೀಸ್‌ನಲ್ಲಿದ್ದರೆ, ಬೌಲರ್‌ ಹೇಗೆ ಬಾಲ್‌ ಎಸೆದರೂ ಅದನ್ನು ನಾನಾ ಸ್ಟೈಲ್‌ನಲ್ಲಿ ಬೌಂಡರಿ ಗೆರೆ ದಾಟಿಸುತ್ತಾರೆ. ಇಲ್ಲಿ ಬೌಲರ್‌ ಹಾಗೂ ಫೀಲ್ಡರ್‌ಗಳು ಮೂಕ ಪ್ರೇಕ್ಷಕರಾಗಬೇಕು ಅಷ್ಟೇ. ಪ್ರಸಕ್ತ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿಯೂ ಒಬ್ಬ ಡಿವಿಲಿಯರ್ಸ್‌  ಕಾಣಿಸುತ್ತಿದ್ದಾನೆ. ಸಾಕ್ಷಾತ್‌ ಎಬಿಡಿ ಆಟವನ್ನೇ ಕಣ್ಣ ಮುಂದೆ ತರುತ್ತಿರುವ 20 ಹರೆಯದ ಆ ಯುವಕನೇ ರಿಷಭ್‌ ಪಂತ್‌.

Advertisement

ಹೇಗೆ ಬೇಕಾದರೂ ಆಡಬಲ್ಲ
ಡೆತ್‌ ಓವರ್‌ ಸಂದರ್ಭದಲ್ಲಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ಕಂಟ್ರೋಲ್‌ ಮಾಡಲು, ಸಾಮಾನ್ಯವಾಗಿ ಯಾರ್ಕರ್‌ ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ತಬ್ಬಿಬ್ಟಾಗುತ್ತಾರೆ. ಆದರೆ ಎಬಿಡಿ, ಧೋನಿ… ಅವರಂತಹ ಬ್ಯಾಟ್ಸ್‌ಮನ್‌ಗಳು ಮಾತ್ರ ಯಾರ್ಕರ್‌ಗಳಿಗೆ ಕೇರ್‌ ಮಾಡದೇ ಅದನ್ನೂ ಬೌಂಡರಿ, ಸಿಕ್ಸರ್‌ ಕಳುಹಿಸುವ ಮೂಲಕ ತಕ್ಕ ಉತ್ತರ ನೀಡುತ್ತಾರೆ. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿರುವ ಪಂತ್‌ ಕೂಡ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಇದನ್ನು ಸಾಬೀತು ಪಡಿಸುತ್ತಿದ್ದಾರೆ.

ಕ್ರೀಡಾಂಗಣದ ಮೂಲೆಮೂಲೆಗೂ ಚೆಂಡನ್ನು ಅಟ್ಟುವ ಕೌಶಲ್ಯ ಬೆಳೆಸಿಕೊಂಡಿರುವ ಪಂತ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ… ಅಂತಹ ಮಾರಕ ಬೌಲರ್‌ಗಳನ್ನು ಚೆಂಡಾಡುತ್ತಾನೆ. ರಿವರ್ಸ್‌ ಸ್ವೀಪ್‌ ಮಾಡಿ ಸಿಕ್ಸರ್‌ ಸಿಡಿಸುತ್ತಾನೆ. ಈ ಮೂಲಕ ತಾರಾ ಆಟಗಾರರಾಗಿ ಬೆಳೆಯುತ್ತಿದ್ದಾರೆ.

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ
ಬ್ಯಾಟ್ಸ್‌ಮನ್‌ ಕಮ್‌ ವಿಕೆಟ್‌ ಕೀಪರ್‌ ಆಗಿರುವ ಪಂತ್‌, ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ 1 ಶತಕ, 4 ಅರ್ಧಶತಕ ಸೇರಿದಂತೆ ಒಟ್ಟು 582 ರನ್‌ ಬಾರಿಸಿ ವೈಯಕ್ತಿಕ ಗರಿಷ್ಠ ರನ್‌ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದುರಾದೃಷ್ಟವಶಾತ್‌ ಉಳಿದ ಆಟಗಾರರ ವೈಫ‌ಲ್ಯದಿಂದ ಡೆಲ್ಲಿ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

2016ನೇ ಆವೃತ್ತಿಯಲ್ಲಿಯೇ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಪಂತ್‌ ಯಶಸ್ವಿಯಾಗಿದ್ದರು. ಆದರೆ, ಅಂತಿಮ 11ರೊಳಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಕಡೆಗೊಮ್ಮೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಪಂತ್‌ ಪ್ರತಿಭೆ ಹೊರಬಂದಿದ್ದು, 2017ನೇ ಆವೃತ್ತಿಯಲ್ಲಿ. ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ಬೆಳೆದ ಪಂತ್‌ ಅನುಭವಿ ಬೌಲರ್‌ಗಳಿಗೆ ಭರ್ಜರಿ ಪಂಚ್‌ ನೀಡುವ ಮೂಲಕ ಗಮನ ಸೆಳೆದಿದ್ದರು. ಇದೇ ಸಂದರ್ಭದಲ್ಲಿ ಡೆಲ್ಲಿ ತಂಡದಲ್ಲಿಯೇ ಇದ್ದ ಶ್ರೇಯಸ್‌ ಐಯ್ಯರ್‌ ಎಂಬ ಹೊಸ ಪ್ರತಿಭೆ ಕೂಡ ಕ್ರಿಕೆಟ್‌ ಜಗತ್ತಿಗೆ ಪರಿಚಯವಾಗಿತ್ತು.

Advertisement

ಈ ಆವೃತ್ತಿಯಲ್ಲಿ ಆರಂಭದಲ್ಲಿ ಮುಂಬೈ, ಪಂಜಾಬ್‌, ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಪಂತ್‌ ವೈಫ‌ಲ್ಯ ಎದುರಿಸಿದ್ದರು. ನಂತರ ನಿಧಾನಕ್ಕೆ ಫಾರ್ಮ್ ಕಂಡುಕೊಂಡು ಎದುರಾಳಿ ಬೌಲರ್‌ಗಳ ಬೆವರಿಳಿಸತೊಡಗಿದರು. ಅದರಲ್ಲಿಯೂ ಸನ್‌ ರೈಸರ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸಾಕ್ಷಾತ್‌ ಎಬಿ ಡಿವಿಲಿಯರ್ ಆಟವನ್ನು ನೆನಪಿಸಿಬಿಟ್ಟರು. ಒಂದು ಹಂತದಲ್ಲಿ ಡೆಲ್ಲಿ ತಂಡ 13.6 ಓವರ್‌ಗೆ 4 ವಿಕೆಟ್‌ ಕಳೆದುಕೊಂಡು ಕೇವಲ 98 ರನ್‌ ಬಾರಿಸಿತ್ತು. ಆದರೆ, ಮತ್ತೂಂದು ಕಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಪಂತ್‌ ಹೈದರಾಬಾದ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಯಾವ ಬೌಲರ್‌ಗಳಿಗೂ ಕನಿಕರ ತೋರಿಸಲಿಲ್ಲ. ಅಂತಿಮವಾಗಿ ಪಂತ್‌ 63 ಎಸೆತದಲ್ಲಿ 128 ರನ್‌ ದಾಖಲಿಸಿದರು. ಅದರಲ್ಲಿ 15 ಬೌಂಡರಿ, 7 ಸಿಕ್ಸರ್‌ ಸೇರಿತ್ತು. ತಂಡ 187 ರನ್‌ ಬಾರಿಸಿಯೂ ಸೋಲುವಂತಾಯಿತು.

ಹೊಸ ಪ್ರತಿಭೆಗಳ ಉಗಮ
ಪ್ರತಿ ಐಪಿಎಲ್‌ನಲ್ಲೂ ಹೊಸ ಹೊಸ ಪ್ರತಿಭೆಗಳು ಉಗಮವಾಗುತ್ತಿವೆ. ಈ ಬಾರಿ ಡೆಲ್ಲಿ ತಂಡದಲ್ಲಿ ಪಂತ್‌, ಶ್ರೇಯಸ್‌ ಐಯ್ಯರ್‌, ಚೆನ್ನೈ ತಂಡದಲ್ಲಿರುವ ಅಂಬಟಿ ರಾಯುಡು, ಮುಂಬೈ ತಂಡದ ಸೂರ್ಯಕುಮಾರ್‌ ಯಾದವ್‌, ರಾಜಸ್ಥಾನ್‌ ತಂಡದ ಸಂಜು ಸ್ಯಾಮ್ಸನ್‌ ಗಮನ ಸೆಳೆಯುತ್ತಿರುವ ಪ್ರತಿಭೆಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next