ಮುಂಬೈ: ಜೂನ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಭಾರತೀಯ ತಂಡ ಹೇಗಿರಲಿದೆ ಎಂದು ಈಗಾಗಲೇ ಹಲವಾರು ಚರ್ಚೆಗಳು ನಡೆಯುತ್ತಿದೆ. ಮಾಜಿ ವೇಗಿ ಜಹೀರ್ ಖಾನ್ ತನ್ನ ವಿಶ್ವಕಪ್ ತಂಡವನ್ನು ಘೋಷಿಸಿದ್ದಾರೆ. ತನ್ನ ತಂಡದಲ್ಲಿ ರಿಷಭ್ ಪಂತ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾಗೆ ಸ್ಥಾನ ನಿಡಿದ್ದಾರೆ.
ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡಾ ಇತ್ತೀಚಿಗೆ ತನ್ನ ತಂಡ ಪ್ರಕಟಿಸಿದ್ದು ರವಿ ಅಶ್ವಿನ್ ಗೆ ಸ್ಥಾನ ನೀಡಿದ್ದರು. ಆದರೆ ಜಹೀರ್ ಖಾನ್ ತಮ್ಮ ತಂಡದಲ್ಲಿ ಜಡೇಜಾಗೆ ಜಾಗ ನೀಡಿದ್ದು, ಅಶ್ವಿನ್ ಹೆಸರು ಇಲ್ಲಿ ಕಾಣಿಸಿಕೊಂಡಿಲ್ಲ. ಜಹೀರ್ ವಿಶ್ವಕಪ್ ತಂಡದಲ್ಲಿ ಮೂವರು ಆಲ್ ರೌಂಡರ್ ಗಳು ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯಾ ಜೊತೆಗೆ ಕೇದಾರ್ ಜಾದವ್ ಮತ್ತು ರವೀಂದ್ರ ಜಡೇಜಾ ಈ ಮೂವರು.
ವಿಶ್ವಕಪ್ ದೊಡ್ಡ ಕೂಟವಾಗಿರುವುದರಿಂದ ತಂಡದಲ್ಲಿ ಎರಡು ಕೀಪರ್ ಗಳಿರಬೇಕು ಎಂದು ಅಭಿಪ್ರಾಯಪಟ್ಟಿರುವ ಜಹೀರ್, ಧೋನಿ ಮತ್ತು ಪಂತ್ ಗೆ ಜಾಗ ನೀಡಿದ್ದಾರೆ. ಮತ್ತೊಬ್ಬ ಕೀಪರ್ ದಿನೇಶ್ ಕಾರ್ತಿಕ್ ಕೇವಲ ಬ್ಯಾಟ್ಸಮನ್ ಆಗಿ ಆಡಿಸುವ ಯೋಚನೆ ಅವರದು. ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ರಲ್ಲಿ ಒಬ್ಬರು ಮಾತ್ರ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸುತ್ತಾರೆ ಎಂದಿದ್ದಾರೆ.
‘ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಂತ್ ಬ್ಯಾಟಿಂಗ್ ನೋಡಿದರೆ ಅವರಿಗೆ ಮ್ಯಾಚ್ ಫಿನಿಶ್ ಮಾಡುವ ಸಾಮರ್ಥ್ಯ ಇದೆ ಎಂದನಿಸುತ್ತದೆ. ಪಂತ್ ವೇಗವಾಗಿ ರನ್ ಗಳಿಸುವುದರಿಂದ ತಂಡ ಸಂಕಷ್ಟದಲ್ಲಿದ್ದಾಗ ವೇಗವಾಗಿ ಜೊತೆಯಾಟ ನಡೆಸುವ ತಾಕತ್ತು ಪಂತ್ ರಲ್ಲಿದೆ ಎಂದು ಜಹೀರ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ತಂಡದಿಂದ ಹೊರಗಿರುವ ಕೆ.ಎಲ್.ರಾಹುಲ್ ಗೆ ಮಿಸಲು ಆರಂಭಿಕನ ಸ್ಥಾನ ನೀಡಿದ ಜಹೀರ್, ಒಂದು ವೇಳೆ ರಾಯುಡು ಮೀಸಲು ಆರಂಭಿಕನ ಸ್ಥಾನ ತುಂಬಿದರೆ ರಾಹುಲ್ ಜಾಗಕ್ಕೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಬೇಕು ಎಂದಿದ್ದಾರೆ.
ತಂಡ : ರೋಹಿತ್ ಶರ್ಮಾ. ಶಿಖರ್ ಧವನ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಅಂಬಟಿ ರಾಯುಡು / ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ರಿಷಭ್ ಪಂತ್, ಕೆ.ಎಲ್.ರಾಹುಲ್ / ವೇಗದ ಬೌಲರ್.