ನಿರ್ದೇಶಕ ಜಯತೀರ್ಥ “ಬ್ಯೂಟಿಫುಲ್ ಮನಸುಗಳು’ ಚಿತ್ರದ ನಂತರ “ವೆನಿಲ್ಲಾ’ ಎಂಬ ಸಿನಿಮಾ ಶುರುಮಾಡಿದ್ದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ “ವೆನಿಲ್ಲಾ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ನಡುವೆಯೇ ಜಯತೀರ್ಥ ನಿರ್ದೇಶನದ ಮತ್ತೂಂದು ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದ ಟೈಟಲ್ ಅನ್ನು ವಿಭಿನ್ನವಾದ ಡಿಸೈನ್ ಮೂಲಕ ನೀಡಲಾಗಿದ್ದು, ಚಿತ್ರದ ಶೀರ್ಷಿಕೆ ಏನೆಂದು ಗುರುತಿಸುವ ಸವಾಲನ್ನು ಚಿತ್ರತಂಡ ಜನರಿಗೆ ಬಿಟ್ಟಿದೆ.
ಮೂಲಗಳ ಪ್ರಕಾರ, ಚಿತ್ರಕ್ಕೆ “ಬೆಲ್ ಬಾಟಮ್’ ಎಂದು ಹೆಸರಿಡಲಾಗಿದ್ದು, ಅದಕ್ಕೆ ತಕ್ಕಂತೆ ಚಿತ್ರದ ಕಥೆ ಕೂಡಾ ಇರುತ್ತದೆಯಂತೆ. ಈ ಚಿತ್ರವನ್ನು ಗೋಲ್ಡನ್ ಹಾರ್ಸ್ ಸಿನಿಮಾಸ್‌ನಡಿ ಸಂತೋಷ್ ಕುಮಾರ್ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರದ ಬರವಣಿಗೆಯಲ್ಲಿ ದಯಾನಂದ್ ಟಿ.ಕೆ. ಕೂಡಾ ಕೈ ಜೋಡಿಸಿದ್ದಾರೆ. ಎಲ್ಲಾ ಓಕೆ, “ಬೆಲ್ ಬಾಟಮ್’ ಹಾಕುವವರು ಯಾರು ಎಂದರೆ ಅದಕ್ಕೆ ಸಿಗುವ ಉತ್ತರ ರಿಷಭ್ ಶೆಟ್ಟಿ.
ನಟರಾಗಿ ಎಂಟ್ರಿಕೊಟ್ಟು ನಂತರ ನಿರ್ದೇಶಕರಾದ ರಿಷಭ್ ಶೆಟ್ಟಿ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸಲಿದ್ದಾರೆ. ನೀವು ಬೇಕಾದರೆ ಅವರನ್ನು ಈ ಚಿತ್ರದ ಹೀರೋ ಎಂದು ಕರೆಯಬಹುದು. ಸದ್ಯ ರಿಷಭ್ ಎರಡು ಸಿನಿಮಾಗಳಲ್ಲಿ ಬಿಝಿ. ಅವರದೇ ಪ್ರಧಾನ ನಿರ್ದೇಶನವಿರುವ “ಕಥಾ ಸಂಗಮ’ ಹಾಗೂ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಗಳಲ್ಲಿ ತೊಡಗಿಕೊಂಡಿರುವ ರಿಷಭ್, ಬಹುತೇಕ ಆ ಚಿತ್ರಗಳ ಕೆಲಸ ಮುಗಿಸಿದ್ದಾರೆ.
ಈಗಾಗಲೇ “ಕಥಾಸಂಗಮ’ದ ಆರು ಕಥೆಗಳ ಚಿತ್ರೀಕರಣ ಮುಗಿದಿದ್ದು, ಇನ್ನೊಂದು ಬಾಕಿ ಇದೆ. ಇನ್ನು “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರವನ್ನು ಜೂನ್‌ನಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ರಿಷಭ್. ಈ ನಡುವೆಯೇ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.