Advertisement

“ಕಾಂತಾರ- 2”ಬರುತ್ತಾ? ದೈವದ ಪಾತ್ರ ಮಾಡುವ ಮುನ್ನ ರಿಷಬ್ ಪೂರ್ವ ತಯಾರಿ ಹೇಗಿತ್ತು?

03:22 PM Oct 02, 2022 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ನಲ್ಲಿ ಈಗ ʼಕಾಂತಾರʼದ ಮಾತು ಜೋರಾಗಿ ನಡೆಯುತ್ತಿದೆ. ರಿಷಬ್ ಶೆಟ್ಟಿ ಅವರ ಸಿನಿಮಾಕ್ಕೆ ಎಲ್ಲೆಡೆಯಿಂದ ಶಹಬ್ಬಾಸ್‌ ಗಿರಿ ಕೇಳಿ ಬರುತ್ತಿದೆ.

Advertisement

ಶನಿವಾರ ಚಿತ್ರ ತಂಡ, ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ ಹಾಗೂ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್‌ ಪಡೆದುಕೊಂಡ ಸಂತಸದಲ್ಲಿ ಸಕ್ಸಸ್‌ ಮೀಟ್‌ ಹಮ್ಮಿಕೊಂಡಿತ್ತು. ಈ ಸಕ್ಸಸ್‌ ಮೀಟ್‌ ನಲ್ಲಿ ಚಿತ್ರ ತಂಡ ಹಲವು ವಿಚಾರಗಳನ್ನು ಹಾಗೂ ಪ್ರೇಕ್ಷಕರಿಗೆ ಧನ್ಯವಾದವನ್ನು ಹೇಳಿದೆ.

ಹೊಂಬಾಳೆಯ ಕಾರ್ತಿಕ್‌ ಗೌಡ ಅವರು ಮಾತಾನಾಡಿ, ಇವತ್ತು ಚಿತ್ರ ಇಷ್ಟು ಒಳ್ಳೆಯ ರೀತಿ ಔಟ್‌ ಪುಟ್‌ ಬಂದಿರುವುದಕ್ಕೆ ಎಲ್ಲರೂ ಕಾರಣ. ಲೈಟ್‌ ಮ್ಯಾನ್‌ ನಿಂದಿಡಿದು‌, ರಿಷಬ್, ಪ್ರಮೋದ್‌, ಪ್ರಗತಿ, ಸಪ್ತಮಿ,‌ ಧರಣಿ (ಕಲಾ ನಿರ್ದೇಶಕ), ಅರವಿಂದ್‌ ಕಶ್ಯಪ್‌ ( ಛಾಯಗ್ರಹಣ) ಪ್ರತಿಯೊಬ್ಬರು ಪರಿಶ್ರಮ ವಹಿಸಿದ್ದಾರೆ. ಬರಹಗಾರರಾದ ಪ್ರಕಾಶ್‌ ತುಮಿನಾಡು, ಅನಿರುದ್ಧ್‌, ಶನಿಲ್‌, ಚಿರಂತ್‌ ಇವರೆಲ್ಲರ ತಂಡ ಶ್ರಮವಹಿಸಿದೆ. ಮ್ಯೂಸಿಕ್‌ ನಲ್ಲಿ ಅಜನೀಶ್‌ ಕೂಡ ತಮ್ಮ ಕೆಲಸವನ್ನು ಅಮೋಘವಾಗಿ ಮಾಡಿದ್ದಾರೆ ಎಂದರು.

ನಟ ಪ್ರಮೋದ್‌ ಶೆಟ್ಟಿ ಅವರು ಮಾತಾನಾಡಿ, ಚಿತ್ರ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ. ಟ್ವೀಟ್‌,ಮೇಸೆಜ್ ಗಳ ಮೂಲಕ ಜನ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಮ್ಮ ನೆಲದ, ಸ್ಥಳೀಯ ಕಥೆಯನ್ನು ತೋರಿಸುವಂತಹ ಪ್ರಯತ್ನವನ್ನು ಅಚ್ಚುಕಟ್ಟಾಗಿ ರಿಷಭ್‌ ಅವರು ಮಾಡಿದ್ದಾರೆ. ರಿಷಬ್ ಅವರ ಒಂದೂವರೆ ವರ್ಷದ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ ಎಂದರು.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಾತಾನಾಡಿ, ನಮ್ಮ ಸಂಸ್ಕೃತಿಯನ್ನು ಹೇಳುವ,  ನಮ್ಮ ನೆಲದ ಕಥೆ. ಇದು ಮಂಗಳೂರು‌, ಕರಾವಳಿಗೆ ಮಾತ್ರ ಸೀಮಿತವಾದದ್ದಲ್ಲ. ದೈವ, ದೇವರುಗಳ ಶಕ್ತಿ, ಅದನ್ನು ನಂಬುವಂತಹ ಶಕ್ತಿ ಭಾರತದಲ್ಲಿ ಹಾಗೂ ಪ್ರಪಂಚದೆಲ್ಲೆಡೆ ಇದ್ದಾರೆ ಎನ್ನುವುದು ನಮ್ಮ ಸಿನಿಮಾವನ್ನು ನೋಡಿ ಒಪ್ಪಿಕೊಂಡಿರುವುದರಿಂದ ಗೊತ್ತಾಗಿದೆ. ಪ್ರತಿ ಹಳ್ಳಿಯಲ್ಲಿ ಅವರು ನಂಬುವಂತಹ ಶಕ್ತಿಗೆ, ಅವರು ನಂಬುವಂತಹ ದೈವಕ್ಕೆ ʼಕಾಂತಾರʼವನ್ನು ಕನೆಕ್ಟ್‌ ಮಾಡಿಕೊಳ್ಳುತ್ತಿದ್ದಾರೆ ಎಂದರು.

Advertisement

ಕೊನೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಿಷಬ್, ʼಕಾಂತಾರʼ ಸಿನಿಮಾದ ಎರಡನೇ ಭಾಗ ಬರಬಹುದೇ ಎನ್ನುವ ಪ್ರಶ್ನೆಗೆ ರಿಷಬ್ “ಗೊತ್ತಿಲ್ಲ ಹಿಂದೆಯೂ ಹೋಗಬಹುದು, ಮುಂದೆಯೂ ಬರಬಹುದು ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸಾಗುತ್ತದೆ ಎನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ. ನೀವು ಸಿನಿಮಾವನ್ನು ಸೂಕ್ಷ್ಮವಾಗಿ ನೋಡಿದರೆ ಅದರಲ್ಲಿ ಬಹಳ ವಿಷಯವನ್ನು ಹೇಳಿದ್ದೇವೆ ಎಂದರು.

ಕಾಂತಾರದಲ್ಲಿ ದೈವ ಆರಾಧನೆಯ ಪಾತ್ರವನ್ನು ಮಾಡುವಾಗ ನಿಮಗೆ ಏನಾದರೂ ಸಮಸ್ಯೆ ಆಯಿತಾ? ಅಥವಾ ನೀವು ಎಲ್ಲಿಯಾದರೂ ಕೇಳಿಕೊಂಡಿದ್ದೀರಾ ಎನ್ನುವ ಪ್ರಶ್ನೆಗೆ ರಿಷಬ್ ಅವರು “ ನಾವು ಏನೇ ಮಾಡಿದರೂ ಮೊದಲು ಅದನ್ನು ನಂಬಬೇಕು. ಈ ರೀತಿಯ ಅಲೋಚನೆ ಬಂದಾಗ ಮೊದಲು ನಾನು ಮಂಗಳೂರಿನ ಸುತ್ತಮುತ್ತಲಿನ ದೈವ ನರ್ತಕರು, ದೈವ ಆರಾಧನೆ ಮಾಡುವ ಹಿರಿಯರು ಅದಕ್ಕೆ ಸಂಬಂಧ ಪಟ್ಟ ಮನೆಯವರು ಹಾಗೂ ವರ್ಗದವರನ್ನು ಭೇಟಿಯಾಗಿ, ಈ ರೀತಿ ಸಿನಿಮಾದಲ್ಲಿ ಮಾಡಲಿದ್ದೇನೆ, ಹೇಗೆ ನಡೆದುಕೊಳ್ಳಬೇಕು? ಒಂದು ವರ್ಗದವರು ಮಾತ್ರ ಈ ಆರಾಧನೆ ಮಾಡುತ್ತಾರೆ ನಾನು ಹೇಗೆ ಇದನ್ನು ಮಾಡಬೇಕೆಂದು ಕೇಳಿದಾಗ, ಅವರು ಇದಕ್ಕೆ ಮೂಲ ಧರ್ಮಸ್ಥಳದ ಮುಂಜುನಾಥ ಅಲ್ಲಿಗೆ ಭೇಟಿ ನೀಡಿ ಎಂದರು, ಅಲ್ಲಿಗೆ ಭೇಟಿ ನೀಡಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದ ಬಳಿಕ ಸಿನಿಮಾಕ್ಕೆ ಇಳಿದೆ ಎಂದರು.

ಸಿನಿಮಾ ಮಾಡುವಾಗ ನಮ್ಮ ಸೆಟ್‌ ನಲ್ಲಿ ನಾನ್‌ ವೆಜ್‌ ಮಾಡುತ್ತಿರಲಿಲ್ಲ. ದೈವಸ್ಥಾನ ಇರುವಲ್ಲಿ ಯಾರೂ ಚಪ್ಪಲಿ ಹಾಕಿಕೊಂಡು ಹೋಗುತ್ತಿರಲಿಲ್ಲ. ಸಿನಿಮಾದ ವೇಳೆ ಒಂದೂವರೆ ತಿಂಗಳು ನಾನು ನಾನ್‌ ವೆಜ್‌ ತಿನ್ನುತ್ತಿರಲಿಲ್ಲ.  ಏಕೆಂದರೆ ನಮ್ಮ ಒಳಗಡೆ ಶುದ್ದಿ ಎನ್ನುವ ಮನೋಭಾವ ಬರಬೇಕು. ದೈವ ಎಂದರೆ  ನಮಗೆ ಅಷ್ಟು ಪವಿತ್ರವಾದ ವಿಚಾರ. ಚಿಕ್ಕ ವಯಸ್ಸಿನಿಂದಲೂ ನಾನು ಅದನ್ನು ನಂಬಿಕೊಂಡು ಬಂದಿರುವುದರಿಂದ ಅದನ್ನು ಹೇಗೆ ಅನುಸರಿಸಬೇಕೆಂದು ನನಗೆ ಹಲವು ಮಂದಿ ಸಲಹೆ ಮಾರ್ಗದರ್ಶನ ಮಾಡಿದ್ದರು, ಅದೇ ರೀತಿ ನಾನು ನಡೆದುಕೊಂಡು ಬಂದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next