Advertisement

ಮನುಷ್ಯ-ಪ್ರಕೃತಿ ನಡುವಿನ ಕೊಂಡಿಯೇ ದೈವಾರಾಧನೆ: ರಿಷಬ್‌ ಶೆಟ್ಟಿ

01:01 AM Oct 04, 2022 | Team Udayavani |

ಮಣಿಪಾಲ: ಕರಾವಳಿಯಲ್ಲಿ ದೈವ, ಭೂತಾರಾಧನೆ ಇರುವಂತೆ ಬೇರೆ ಭಾಗಗಳಲ್ಲಿಯೂ ನಾನಾ ಬಗೆಯ ಆರಾಧನೆಗಳು ವಿಭಿನ್ನ ಸ್ವರೂಪದಲ್ಲಿವೆ. ಈ ಆರಾಧನೆಗಳು ಸಮಾಜದಲ್ಲಿ ಸಮತೋಲನ ಕಾಪಾಡುತ್ತಿವೆ ಹಾಗೂ ಪ್ರಕೃತಿ ಮತ್ತು ಮನುಷ್ಯರ ನಡುವೆ ಕೊಂಡಿಯಾಗಿಯೂ ನಿಂತಿವೆ. ಆಚರಣೆ, ಭಾವನೆಗೆ ಧಕ್ಕೆಯಾಗದಂತೆ ಸಿನೆಮಾ ಮಾಡಿದ್ದೇವೆ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದರು.

Advertisement

ಉದಯವಾಣಿ ಕಚೇರಿಯಲ್ಲಿ ಸೋಮವಾರ ನಡೆದ “ಕಾಂತಾರ’ ಸಿನೆಮಾ ತಂಡದ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಗ್ರ ಭಾರತೀಯ ಸಂಸ್ಕೃತಿಯ ಪರಿಕಲ್ಪನೆಯಲ್ಲಿ ಈ ಚಿತ್ರ ನೋಡಬೇಕು. ಸ್ಥಳೀಯ ವಿಷಯವನ್ನು ಕನ್ನಡ ಭಾಷೆಯಲ್ಲೇ ಸ್ಪಷ್ಟ ಹಾಗೂ ಅರ್ಥಪೂರ್ಣವಾಗಿ ಜನರಿಗೆ ತಿಳಿಸಲು ಸಾಧ್ಯ. ಅದು ವಿಶ್ವದಾದ್ಯಂತ ಮೆಚ್ಚುಗೆಯೂ ಪಡೆಯುತ್ತಿದೆ. ಕೆಲವೇ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಡಬ್‌ ಆಗಿ ಚಿತ್ರ ತೆರೆಗೆ ಬರಲಿದೆ ಎಂದರು.

ದೈವದ ಮುಂದೆ ಪ್ರಶ್ನೆ
ಕಾಂತಾರ ಚಿತ್ರದ ಒಂದು ಸೀಕ್ವೆನ್ಸ್‌ ಶೂಟ್‌ ಆದ ಬಳಿಕ ಚಿತ್ರ ತಂಡದ ಜತೆಗೆ ಪಂಜುರ್ಲಿ ದೈವದ ಕೋಲಕ್ಕೆ ಹೋಗಿದ್ದೆ. ಆಗ ದೈವದ ಬಳಿ ಈ ಸಿನೆಮಾ ಮಾಡುತ್ತಿರುವುದಾಗಿ ಪ್ರಶ್ನೆ ಇಟ್ಟಿದ್ದೆ. ದೈವದ ಕಾರ್ಣಿಕ ಹೇಳುವ ಸಿನೆ ಮಾಗೆ ಕೈ ಹಾಕಿದ್ದೇನೆ, ಅನುಗ್ರಹ ಬೇಕು ಎಂದು ಕೇಳಿಕೊಂಡಿದ್ದೆ. “ಅಲ್ಲಿ ಪಂಜುರ್ಲಿ ದೈವ ತನ್ನ ಬಣ್ಣ ತೆಗೆದು ನನ್ನ ಮುಖಕ್ಕೆ ಹಚ್ಚಿತ್ತು. ಆ ಕ್ಷಣ ನನಗೆ ರೋಮಾಂಚನವಾಗಿದ್ದು ಮಾತ್ರವಲ್ಲದೆ, ಏನೋ ಒಂದು ರೀತಿಯ ಶಕ್ತಿಯ ಸಂಚಲನವೂ ಆಯಿತು. ಎಲ್ಲವೂ ದೈವ ಇಚ್ಛೆ. ಪಂಜುರ್ಲಿ ಕೋಲದಲ್ಲಿ ನಮಗೆ ದೈವದ ಆಶೀರ್ವಾದ ಸಿಕ್ಕಿತ್ತು. ಇಡೀ ಸಿನೆ ಮಾದಲ್ಲಿ ನನಗೆ ಒಂದು ಶಕ್ತಿಯ ರಕ್ಷಣೆಯಿತ್ತು. ಏನೇ ಸಮಸ್ಯೆ ಇದ್ದರೂ ಪರಿಹಾರ ಸಿಗುತ್ತಿತ್ತು ಎಂದು ತಿಳಿಸಿದರು.

ಅರಣ್ಯ ಪ್ರದೇಶದ ಜನರ ರೋದನೆಗೆ ಸಂಬಂಧಿಸಿದಂತೆ ತಂದೆಯ ಜತೆಗೂ ಮಾತುಕತೆ ನಡೆಸಿದ್ದೆ. ಈ ಚಿತ್ರ ಮಾಡುವಲ್ಲಿ ದೈವ ನರ್ತಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಸಿಕ್ಕಿದೆ ಮತ್ತು ಎಲ್ಲ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲಿಯೂ ಆರಾಧನೆಯ ವಿಷಯವಾಗಿ ಧಕ್ಕೆಯಾಗಿಲ್ಲ ಎಂಬುದನ್ನು ಚಿತ್ರ ನೋಡಿದ ಬಳಿಕ ಅವರೂ ಭಾವುಕರಾಗಿದ್ದರು. ಸ್ಥಳೀಯ ಯುವ ಪ್ರತಿಭೆಗಳು ಕಿರಿಯ ಕಲಾವಿದರಾಗಿಯೂ ಅಭಿನಯ ಮಾಡಿದ್ದಾರೆ ಎಂದು ಹೇಳಿದರು.

ಚಲನಚಿತ್ರ ಮಂದಿರಗಳಲ್ಲಿ ಸಿನೆಮಾ ನೋಡುವ ಸಂದರ್ಭದಲ್ಲಿ ವೀಡಿಯೋ ಶೂಟಿಂಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ. ಈ ರೀತಿ ಶೂಟಿಂಗ್‌ ಮಾಡುವುದು ಸರಿಯಲ್ಲ. ಹಾಗೆಯೇ ಸಿನೆಮಾ ನೋಡಿ ಬಂದ ಅನಂತರದಲ್ಲಿ ನೀವಿರುವ ಪರಿಸರದಲ್ಲಿ ದೈವನರ್ತನೆ ಅಥವಾ ಕೂಗುವುದನ್ನು ಮಾಡದಂತೆ ಮನವಿ ಮಾಡಿದರು.

Advertisement

ನಟ ಪ್ರಮೋದ್‌, ನಟಿ ಸಪ್ತಮಿ ಗೌಡ ಅನುಭವ ಹಂಚಿಕೊಂಡರು. ಸಹಕಲಾವಿದರು ಉಪಸ್ಥಿತರಿದ್ದರು.
ಎಂಎಂಎನ್‌ಎಲ್‌ ಎಂಡಿ, ಸಿಇಒ ವಿನೋದ್‌ ಕುಮಾರ್‌ ಅವರು ಚಿತ್ರ ತಂಡವನ್ನು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next