ಮಣಿಪಾಲ : “ನಾವಿಲ್ಲಿವರಿಗೂ ಹಿಂಗಿನ್ ಸಿನ್ಮಾ ಮಾಡಿರ್ಲಿಲ್ಲ.. ಬಾರಿ ಲಾಯ್ಕಿತ್.. ಥಿಯೇಟ್ರಿಗ್ ಹೋಯ್ ಕಾಣಿ” ಕುಂದಾಪುರ ಭಾಷೆಯೆಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ತಮ್ಮ ಮಾತನ್ನ ಶುರು ಮಾಡಿದ್ದು ಹೀಗೆ. ಮಧ್ಯಾಹ್ನದ ಜಳದಲ್ಲೂ ಹಾಸ್ಯ ಹರಟೆಗೇನೂ ಕಡಿಮೆ ಇರಲಿಲ್ಲ. ಒಂಚೂರು ವಿನೋದದ ಜೊತೆ ಪ್ರಮೋದರ ಮಾತು ಕಿವಿಗೆ ಕಚಗುಳಿ ಇಟ್ಟಿತ್ತು. ಹಾಗೆ ‘ಹೀರೋ’ ಜನ್ಮ ತಾಳಿದ ಬಗ್ಗೆ ಉದಯವಾಣಿ ಜೊತೆ ಮಾತುಕತೆ ನಡೆಸಿದ್ದು ಹೀಗೆ..
ಇದನ್ನೂ ಓದಿ:ಉದಯವಾಣಿ ಕಚೇರಿಗೆ ಸ್ಯಾಂಡಲ್ ವುಡ್ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಭೇಟಿ
*ಶೆಟ್ರೇ ಹೀರೋ ಚಿತ್ರದ ಬಗ್ಗೆ ಏನ್ ಹೇಳ್ತೀರಾ : ಈ ರೀತಿಯ ಸಿನಿಮಾವನ್ನು ನಾವು ಇಲ್ಲಿಯವರೆಗೆ ಮಾಡಿಯೇ ಇಲ್ಲ. ಎ ಸರ್ಟಿಫಿಕೇಟ್ ಸಿಕ್ಕಿದ್ರೂ ಕೂಡ ಥಿಯೇಟರ್ನಲ್ಲಿ ಸಿನಿಮಾ ಇದೆ ಅಂದ್ರೆ ನೀವೇ ಯೋಚನೆ ಮಾಡಿ. ಚಿತ್ರದಲ್ಲಿ ಒಂಚೂರು ರಕ್ತ ಜಾಸ್ತಿ ಹರಿದಿದೆ ಅಷ್ಟೆ. ಅದು ಬಿಟ್ರೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಸಿನಿಮಾ.
*ನಿಮ್ಮ ‘ಹೀರೋ’ ಹುಟ್ಟಿದ್ದು ಹೇಗೆ : ಆಗತಾನೇ ಲಾಕ್ ಡೌನ್ ಶುರುವಾಗಿತ್ತು. ಎಲ್ಲೂ ಹೊರಗಡೆ ಹೋಗುವ ಹಾಗೇ ಇರಲಿಲ್ಲ. ಈ ಕಠಿಣ ಪರಿಸ್ಥಿತಿಯಲ್ಲಿ ಹುಟ್ಟಿದವನೇ ಹೀರೋ. ಒಂದೇ ದಿನ ಕಥೆ ಬರೆದು, ಅತೀ ಕಡಿಮೆ ಅವಧಿಯಲ್ಲಿ, ಲಾಕ್ ಡೌನ್ ವೇಳೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ನಿರ್ಮಾಣ ಮಾಡಿದ ಸಿನಿಮಾ. ಇದಕ್ಕೆ ಕಾರಣ ನಮ್ಮಲ್ಲಿದ್ದ ಟೀಂ ವರ್ಕ್. ಎಲ್ಲರೂ ಎಲ್ಲಾ ಕೆಲಸವನ್ನು ಮಾಡಬೇಕಿತ್ತು.
*ರಾಬರ್ಟ್ ಜೊತೆ ಚಿತ್ರಮಂದಿರಕ್ಕೆ ನಿಮ್ಮ ಸಿನಿಮಾ ಕೂಡ ಬಂದಿದೆ, ಇದ್ರ ಬಗ್ಗೆ : ದರ್ಶನ್ ಸರ್ ಬಗ್ಗೆ ಹೇಳುವ ಹಾಗೇ ಇಲ್ಲ. ಅವರು ಕನ್ನಡದ ಹೆಮ್ಮೆ. ರಾಬರ್ಟ್ ಮಧ್ಯೆಯೂ ನಮ್ಮ ಸಿನಿಮಾ ಓಡ್ತಾ ಇದೆ. ದರ್ಶನ್ ಚಿತ್ರ ಮಂದಿರಗಳಿಗೆ ಅಭಿಮಾನಿಗಳನ್ನು ವಾಪನ್ನು ಕರೆತರುತ್ತಿದ್ದಾರೆ. ನಾವೇ ಮೊದಲು ಫಿಕ್ಸ್ ಆಗಿದ್ವಿ. ರಾಬರ್ಟ್ ಬಂದ ಮೇಲೆ ಥಿಯೇಟರ್ ಕಡಿಮೆ ಆಗುತ್ತೆ ಎಂದು. ಆದ್ರಿಂದ ಏನೂ ಸಮಸ್ಯೆ ಆಗಿಲ್ಲ.
* ‘ಹೀರೋ’ವಿನ ಎಕ್ಸ್ ಕ್ಲೂಸಿವ್ ಏನ್ ಹೇಳ್ತೀರ : ನಾವು ಇಲ್ಲಿಯವರೆಗೆ ಈ ಬಗ್ಗೆ ಎಲ್ಲಿಯೂ ಹೇಳಿಲ್ಲ. ನಮ್ಮ ಹೀರೋ ಸಿನಿಮಾ ತೆರೆ ಕಂಡ ಮೊದಲ ದಿನವೇ ಹಾಕಿದ ಬಂಡವಾಳವನ್ನು ಪಡೆದು, ಲಾಭದತ್ತ ಮುನ್ನುಗ್ಗಿದ್ದೇವೆ. ಪೊಗರು, ರಾಬರ್ಟ್ ಚಿತ್ರಗಳ ಮಧ್ಯೆ ಓಡುತ್ತಿದೆ. 170 ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.
*ಸುದೀಪ್ ಜೊತೆ ಸಿನಿಮಾ ಮಾಡುತ್ತೀರಾ : ಅವರ ಜೊತೆ ಸಿನಿಮಾ ಮಾಡೋದು ಸುಲಭದ ಮಾತಲ್ಲ. ಅವರ ಜೊತೆ ಕೆಲಸ ಮಾಡಬೇಕು ಅಂದ್ರೆ ಮೊದಲೇ ಪ್ಲಾನ್ ಇರಬೇಕು. ಅವರ ಅಭಿಮಾನಿಗಳಿಗೂ ಬೇಸರ ಆಗಬಾರದು, ನಮ್ಮವರಿಗೂ ಬೇಜಾರು ಆಗಬಾರದು. ಇಂತಹ ಕಥೆ ಬಂದಾಗ ಅವರ ಬಳಿ ಹೋಗ್ತೇನೆ.
*ಬೆಲ್ ಬಾಟಂ-2 ಯಾವಾಗ : ಎಲ್ಲಾ ಯೋಜನೆಗಳು ನಡೆಯುತ್ತಿವೆ. ಮುಂದಿನ ಫೆಬ್ರವರಿಗೆ ಸಿನಿಮಾ ತೆರೆಗೆ ಬರುವ ಸಾಧ್ಯೆತೆ ಇವೆ. ಇದೇ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಶೂಟಿಂಗ್ ಶುರುವಾಗುತ್ತೆ. ಈ ಸಿನಿಮಾ ನಂತ್ರ ನಾನು ರುದ್ರಪ್ರಯಾಗ ಸಿನಿಮಾವನ್ನು ನಿರ್ದೇಶನ ಮಾಡುತ್ತೇನೆ.
*ಒಟಿಟಿ ಬಗ್ಗೆ ಏನ್ ಹೇಳ್ತೀರಾ : ಇದು ಒಳ್ಳೆಯದೆ. ಆದ್ರೆ ಇವರಿನ್ನೂ ನಮ್ಮ ಕನ್ನಡವನ್ನ ಹೆಚ್ಚಾಗಿ ಪರಿಗಣಿಸಿಲ್ಲ. ಇದು ಬೇಜಾರು ತರಿಸಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನ ಫೋಕಸ್ ಮಾಡಿದ್ರೆ ಉತ್ತಮವಾಗಿರುತ್ತೆ. ಆದ್ರೆ ಎಲ್ಲೂ ಹಾದಿ ತಪ್ಪಬಾರದು.
*ಪೈರಸಿ ಬಗ್ಗೆ ನಿಮ್ಮ ಪ್ರತಿಕ್ರಿಯೆ : ನಾವು ಸಂಬಂಧಗಳ ಮೇಲೆ ಬದುಕುವ ಜನ. ಎಲ್ಲಾ ಕನ್ನಡಿಗರು ಅಷ್ಟೇ. ಈ ಪೈರಸಿ ಮಾಡೋದ್ರಿಂದ ನಿರ್ಮಾಪಕರು ಮತ್ತೊಮ್ಮೆ ದೊಡ್ಡ ದೊಡ್ಡ ಸಿನಿಮಾ ಮಾಡಲು ಮುಂದೆ ಬರಲ್ಲ. ಯಾರು ಇಂತಹ ಪೈರಸಿ ಮಾಡ್ತಾರೋ ಅವರಿಗೆ ಸರಿಯಾಗಿ ಬಾರಿಸ್ಬೇಕು. ಅಂತವರ ಬಗ್ಗೆ ಗಮನ ಕೊಡಬೇಕು.
*ಯುವ ಕಲಾವಿದರಿಗೆ ರಿಷಬ್ ನಿಮ್ಮ ಕಿವಿ ಮಾತು : ಯಾರೂ ಕಷ್ಟ ಇಲ್ಲದೆ ಬೆಳೆಯೋಕೆ ಆಗಲ್ಲ. ಸುಲಭವಾಗಿ ಹೆಸರು ಮಾಡಿದ್ರೆ ಖುಷಿ ಇರಲ್ಲ. ಮುಂದೆ ನಿಮ್ಮನ್ನ ಪತ್ರಕರ್ತರು ಸಂದರ್ಶನ ಮಾಡುವಾಗ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಲಾದರೂ ಕಷ್ಟ ಪಟ್ಟು ಕೆಲಸ ಮಾಡಿ, ಮುಂದೆ ಬರುತ್ತೀರ.