ಕೋಯಿಕ್ಕೋಡ್: ಕನ್ನಡದ ಸೂಪರ್ ಹಿಟ್ ಚಲನಚಿತ್ರ ‘ಕಾಂತಾರ’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಭಾನುವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿ, ಚಿತ್ರದ ಹಾಡಿನಲ್ಲಿ ಕೃತಿಚೌರ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಕೋಯಿಕ್ಕೋಡ್ ನಗರ ಪೊಲೀಸರ ಮುಂದೆ ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಜರಾಗಿದ್ದರು.
“ನ್ಯಾಯಾಲಯದ ನಿರ್ದೇಶನದಂತೆ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದರು. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದರೆ, ಅವರನ್ನು ಮತ್ತೆ ಕರೆಯಲಾಗುವುದು” ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಇದನ್ನೂ ಓದಿ:ನಾಗ್ಪುರ ಪಿಚ್ ನಲ್ಲಿಯೇ ಪ್ರಾಕ್ಟಿಸ್ ಮಾಡುವ ಬಯಕೆಗೆ ತಣ್ಣೀರೆರಚಿದ ಸಿಬ್ಬಂದಿ; ಆಗಿದ್ದೇನು?
ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಅಂತಿಮ ಆದೇಶದವರೆಗೆ ‘ವರಾಹರೂಪಂ’ ಗೀತೆಯೊಂದಿಗೆ ಚಿತ್ರವನ್ನು ಪ್ರದರ್ಶಿಸದಂತೆ ಕನ್ನಡ ಬ್ಲಾಕ್ ಬಸ್ಟರ್ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನಿರ್ದೇಶಿಸಿದ ಕೇರಳ ಹೈಕೋರ್ಟ್‌ನ ಷರತ್ತಿಗೆ ಸುಪ್ರೀಂ ಕೋರ್ಟ್ ಫೆಬ್ರವರಿ 10 ರಂದು ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‌ನ ಷರತ್ತುಗಳಲ್ಲಿ ಒಂದನ್ನು ಮಾರ್ಪಡಿಸಿದ ಪೀಠವು ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಬಂಧಿಸಿದರೆ ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿದೆ.