ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬುಧವಾರ ಆಟೋರಿಕ್ಷಾ ಚಾಲಕರು, ರೈಲು ಪ್ರಯಾಣಿಕರು ಮತ್ತು ಇತರ ಕೆಲವು ಮಂದಿಯ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಘಟನೆಯ ವೀಡಿಯೋವನ್ನು ಆಧರಿಸಿ ಸುಮಾರು 7 ಮಂದಿಯ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಿನ್ನೆಲೆ :
ರೈಲಿನಲ್ಲಿ ಬಂದ ದಂಪತಿಯನ್ನು ಕರೆದುಕೊಂಡು ಹೋಗಲು ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದಿದ್ದರು. ಅವರು ವಾಹನವನ್ನು ರೈಲು ನಿಲ್ದಾಣದ ಬಳಿ ಪಾರ್ಕಿಂಗ್ ಮಾಡಿದ್ದರು. ಈ ವಿಚಾರವಾಗಿ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುವವರು ಮತ್ತು ಆಟೋರಿಕ್ಷಾ ಚಾಲಕರು ಆಕ್ಷೇಪ ವ್ಯಕ್ತಪಡಿಸಿ ರೈಲು ಪ್ರಯಾಣಿಕರು ಹಾಗೂ ಇತರ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ವಾಗ್ವಾದ, ತಳ್ಳಾಟ, ಗಲಾಟೆ ನಡೆದಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.