Advertisement

ಕೇಂದ್ರೀಯ ವಿವಿಯಲಿ ವಿದ್ಯಾರ್ಥಿಗಳ ಹೊಡೆದಾಟ

11:42 AM Apr 12, 2022 | Team Udayavani |

ಕಲಬುರಗಿ: ಜಿಲ್ಲೆಯ ಕಡಗಂಚಿಯಲ್ಲಿರುವ ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರವಿವಾರ ಸಂಜೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎದುರು- ಬದುರು ಪ್ರತಿಭಟನೆ ನಡೆಸಿದ್ದರಿಂದ ಸೋಮವಾರ ಇಡೀ ದಿನ ವಿವಿ ಹಲವಾರು ಘಟನೆಗಳಿಗೆ ಸಾಕ್ಷಿಯಾಯಿತು.

Advertisement

ರಾಮ ನವಮಿಯಂದು ನಡೆದ ಹಲ್ಲೆ ಘಟನೆಯಲ್ಲಿ ವಿವಿಯ ವಿದ್ಯಾರ್ಥಿಗಳಾದ ಜೇವರ್ಗಿ ತಾಲೂಕು ಶಖಾಪುರ ಗ್ರಾಮದ ವಿಶ್ವನಾಥ ದಿವಾಣ ಮತ್ತು ರಾಜಸ್ಥಾನದ ನರೇಂದ್ರಕುಮಾರ್‌ ಧರಿಯಾ ಎಂಬುವರು ಗಾಯಗೊಂಡಿದ್ದಾರೆ. ಹಲ್ಲೆಗೆ ವಿವಿಧ ಕಾರಣಗಳು ಎಂಬುದಾಗಿ ಹೇಳಲಾಗುತ್ತಿದೆ ಆದರೂ ಪ್ರಮುಖವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ನಾವು ರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದೆವು. ಈ ಕಾರಣಕ್ಕಾಗಿಯೇ ಎಡಪಂಥಿಯ ವಿಚಾರಧಾರೆಯ ವಿದ್ಯಾರ್ಥಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ವಿವಿಯಲ್ಲಿ ಹೆಚ್ಚಿರುವ ಎಡಪಂಥಿಯ ಚಟುವಟಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನವರು ವಿವಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ದಲಿತ ವಿದ್ಯಾರ್ಥಿ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಯವರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ವಿವಿ ಆವರಣದಲ್ಲಿ ಇಡೀ ಪ್ರತಿಭಟನೆಯ ಘೋಷಣೆ ಕಂಡು ಬಂತಲ್ಲದೇ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

ಪ್ರಕರಣ ದಾಖಲು: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸಾದಿಕ್‌, ರಾಹುಲ್‌, ರಾಹುಲ್‌ ಆರ್ಯ ಸೇರಿ ನಾಲ್ವರ ವಿರುದ್ಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಯತ್ನ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಇಶಾ ಪಂತ್‌ ತಿಳಿಸಿದ್ದಾರೆ.

ಬೆದರಿಕೆ ಹಾಕಿದ್ದರು: ಎಬಿವಿಪಿ ಮತ್ತು ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ವಿವಿ ಆವರಣದಲ್ಲಿ ನಡೆಸಬಾರದು ಎಂಬುದಾಗಿ ಈ ಮೊದಲಿನಿಂದಲೂ ನಮಗೆ ಬೆದರಿಕೆ ಹಾಕುತ್ತಿದ್ದರು. ನಾವು ರಾಮನವಮಿ ಅಂಗವಾಗಿ ಪೂಜೆ ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆಂಧ್ರಪ್ರದೇಶದ ಸಾದಿಕ್‌ ಎಂಬಿಎ ಓದುತ್ತಿದ್ದು, ರಾಹುಲ್‌ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇವರು ನನ್ನನ್ನು ಅಪಹರಿಸಲು ಮತ್ತು ಬ್ಲೇಡ್‌ನಿಂದ ಕುತ್ತಿಗೆ ಕೊಯ್ಯಲು ಯತ್ನಿಸಿದರು. ಇವರನ್ನು ಕಾಲೇಜಿನಿಂದ ವಜಾಗೊಳಿಸಬೇಕೆಂದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ವಿಶ್ವನಾಥ ಒತ್ತಾಯಿಸಿದ್ದಾರೆ.

Advertisement

ಒಟ್ಟಾರೆ ವಿವಿಯಲ್ಲಿ ಈ ಹಿಂದೆ ಅತ್ಯಾಚಾರ ಪ್ರಕರಣ ಹಾಗೂ ವಿದ್ಯಾರ್ಥಿ ಆತ್ಮಹತ್ಯೆಯಂತಹ ಪ್ರಕರಣಗಳ ನಡುವೆ ಈಗ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next