ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಒಂದು ವೇಳೆ ಕಾಮಗಾರಿ ಕಳಪೆ ನಡೆಸಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ಉಣಕಲ್ಲ ಸಿದ್ದೇಶ್ವರ ನಗರದಲ್ಲಿ ಮಂಗಳವಾರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಕೆಲಸಗಳು ವೇಗ ಪಡೆದಿದ್ದು, ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಕೆಲಸ ನಿಧಾನಗತಿಯಲ್ಲಿ ನಡೆದಿದೆ, ಕೆಲಸಕ್ಕೆ ವೇಗ ನೀಡಲಾಗುವುದು ಎಂದರು.
ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸಂಚಾರಿ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ರಿಂಗ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ವಿಜಯಪುರ ರಸ್ತೆಯಿಂದ ಗದಗ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದ್ದು, ಗದಗ ರಸ್ತೆಯಿಂದ ಬೆಂಗಳೂರ ರಸ್ತೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಕಾಮಗಾರಿ ಮುಕ್ತಾಯಗೊಂಡಲ್ಲಿ ಚನ್ನಮ್ಮ ವೃತ್ತದ ಬಳಿಯ ವಾಹನ ದಟ್ಟಣೆ ಒತ್ತಡ ಕಡಿಮೆಯಾಗಲಿದೆ ಎಂದರು.
ನಗರದಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರಸ್ತೆಗಳನ್ನು ಸುಸ್ಥಿಯಲ್ಲಿಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದರು. ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದು, ಸದ್ಯ ಎಲ್ಲಿಯೂ ಅಕ್ಸಿಜನ್ ಕೊರತೆ ಕಾಣುತ್ತಿಲ್ಲ. ಇದರಿಂದ ಕೈಗಾರಿಕೆಗಳಿಗೆ ಆಕ್ಸಿಜನ್ ನೀಡಲಾಗುತ್ತಿದೆ. ವೈದ್ಯಕೀಯ ಬಳಕೆಗೆ ಸುಮಾರು 500 ಮೆಟ್ರಿಕ್ ಟನ್ ಆಕ್ಸಿಜನ್ ಇರಿಸಿಕೊಂಡು ಉಳಿದಿದ್ದನ್ನು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 40 ಮೆಟ್ರಿಕ ಟನ್ ಇದ್ದು ಇಲ್ಲಿ 20 ಮೆಟ್ರಿಕ ಟನ್ ಸಾಕಾಗಲಿದೆ ಎಂದರು.
ಧಾರವಾಡ ಮಮ್ಮಿಗಟ್ಟಿ ಬಳಿ ಯುಪ್ಲೆಕ್‌ಗೆ 50 ಎಕರೆ ಭೂಮಿ ನೀಡಲಾಗಿದೆ. ಕಂಪೆನಿ ಕೊರೊನಾ ಸಮಯದಲ್ಲೂ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಪ್ಯಾಕೇಜಿಂಗ್ ಯುನಿಟ್ ಆರಂಭಿಸಲಿದೆ ಎಂದರು. ಏಕಸ್ ಸಂಸ್ಥೆಗೆ 358 ಎಕರೆ ಭೂಮಿ ನೀಡಲಾಗಿದೆ. 30-40 ಎಕರೆ ಭೂಮಿಯ ತಾಂತ್ರಿಕ ತೊಂದರೆ ಇದ್ದು, ಅದನ್ನು ಸರಿಪಡಿಸಿ ನೀಡಲಾಗುವುದು. ಇನ್ನು ಹಲವು ಕಂಪನಿಗಳು ಬರಲು ಉತ್ಸುಕತೆ ತೋರಿಸಿದ್ದು ಅದರ ಕುರಿತು ಚರ್ಚೆಗಳು ನಡೆದಿವೆ ಎಂದರು.
ಮಾಜಿ ಮಹಾಪೌರ ಅಶ್ವಿನಿ ಮಜ್ಜಗಿ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣಾ ಕೊರವಿ, ಚನ್ನಬಸಪ್ಪ ಧಾರವಾಡಶೆಟ್ರ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ ಇನ್ನಿತರರಿದ್ದರು.