ವಿಜಯಪುರ : ಹಿರಿಯ ನಾಗರಿಕರು ನಿಯಮಿತ ಯೊಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಧೂಮಪಾನ ಚಟ ಇದ್ದಲ್ಲಿ ತ್ಯಜಿಸುವ ಮೂಲಕ ಅರೋಗ್ಯ ಕಾಯ್ದುಕೊಳ್ಳಬೇಕು ಎಂದು ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಅಧೀಕ್ಷಕ ಡಾ| ವಿಜಯಕುಮಾರ ಕಲ್ಯಾಣಪ್ಪಗೋಳ ಅಭಿಪ್ರಾಯಪಟ್ಟರು.
ನಗರದಲ್ಲಿ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಜೆರಿಯಾಟ್ರಿಕ್ ಕ್ಲಿನಿಕ್‌ನಿಂದ ಹಿರಿಯ ನಾಗರಿಕರಲ್ಲಿ ಶ್ವಾಸಕೋಶ ಸಾಮರ್ಥ್ಯ ಪರೀಕ್ಷೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಡಾ| ಆನಂದ ಅಂಬಲಿ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವುದರ ಕುರಿತು ಉಪನ್ಯಾಸ ನೀಡಿ, ಉತ್ತಮ ಶ್ವಾಸಕೋಶ ಹೊಂದಲು ಹತ್ತು ಸೂತ್ರ ಪಾಲಿಸಬೇಕು. ಬೀಡಿ, ಸಿಗರೇಟ್ ಸೇರಿದಂತೆ ತಂಬಾಕು ಸೇವನೆ ತ್ಯಜಿಸಬೇಕು. ನಿಯಮಿತ ಯೋಗಾಭ್ಯಾಸ, ಸೈಕ್ಲಿಂಗ್, ಪುಗ್ಗಾ ಉಬ್ಬಿಸುವುದು, ಬೆಳಗಿನ ನಡಿಗೆ, ಮೆಟ್ಟಿಲು ಏರಿ, ಇಳಿಯುವುದು, ಯೋಗ ಅಭ್ಯಾಸದಲ್ಲಿ ಪ್ರಾಣಾಯಾಮ ರೂಢಿಸಿಕೊಳ್ಳುವುದು, ಕಪಾಲಭಾತಿ, ಭಸ್ತ್ರಿಕಾ, ಉದ್ಯಾನ ಭಾಂಡಾ ಹಾಗೂ ವಿವಿಧ ವ್ಯಾಯಾಮಗಳನ್ನು ಮಾಡಿದರೆ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವುದರಿಂದ ನಿಮೋನಿಯಾ, ಅಸ್ಥಮಾ ಮುಂತಾದ ರೋಗಗಳನ್ನು ತಡೆಗಟ್ಟಬಹುದು ಹಾಗೂ ಜೀವನದ ಗುಣಮಟ್ಟ ಹೆಚ್ಚಿಸಲು ಸಹಕಾರಿ ಆಗುತ್ತದೆ. ನಿಮೋನಿಯಾದಂತಹ ಭಯಾನಕ ಖಾಯಿಲೆಗಳನ್ನು ತಡೆಗಟ್ಟಲು ಲಸಿಕೆಗಳು ಲಭ್ಯವಿದ್ದು, ಹಿರಿಯ ನಾಗರಿಕರು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.
ಇದೇ ವೇಳೆ ಹಿರಿಯ ನಾಗರಿಕರಲ್ಲಿ ಶ್ವಾಸಕೋಶದ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು. ಶಿಬಿರದಲ್ಲಿ 50 ಹಿರಿಯ ನಾಗರಿಕರಿಗೆ ಝೈಡಸ್ ಕಂಪನಿ ವತಿಯಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರೀಕ್ಷಿಸಲಾಯಿತು. ಆರ್.ಎನ್. ಜಕಾತಿ, ಎಸ್.ಎಸ್. ಯರಗಲ್, ಲಕ್ಷ್ಮ್ಮಣಪ್ಪ ಬಿರಾದಾರ ಇದ್ದರು.