ಅಳಿಸಿ ಹೋಗಿರುವ ನೆನಪುಗಳ ಮಧ್ಯೆ ಅಚ್ಚಾಗಿ ಉಳಿದಿರುವ ನೆನಪುಗಳಲ್ಲಿ ಇದು ಒಂದು. ಕಹಿ ಎನ್ನುವ ನೆನಪಿಗಿಂತ ಸಿಹಿ ಎನಿಸುವ ನೆನಪುಗಳೇ ಹೆಚ್ಚು. ನಮ್ಮ ನೆಚ್ಚಿನ ಸೈಕಲ್ ತುಳಿಯುವ ಹುಚ್ಚು ಹಾಗೂ ಸಾವಿರಾರು ಕಿಲೋ ಮೀಟರ್ ಗಟ್ಟಲೆ ಸೈಕಲ್ ಪಯಣವು ಅದೆಷ್ಟು ಅನುಭವದ ಬುತ್ತಿಯ ಗಂಟನ್ನು ಕಟ್ಟಿಕೊಟ್ಟಿದೆ. ದಾರಿ ಉದ್ದಕ್ಕೂ ಜನರಿಂದ ಸಿಗುತ್ತಿದ್ದ ಪ್ರೀತಿ, ವಾತ್ಸಲ್ಯ, ಕನಿಕರದ ಮಾತುಗಳು ಹೀಗೆ ಹಲವಾರು ನೆನಪುಗಳು ಹೊಸ ಚಿಗುರೊಡೆದು ಹಚ್ಚ ಹಸುರಾಗಿವೆ.
ನಾವು ಎಷ್ಟೇ ದೊಡ್ಡವರಾಗಿರಬಹುದು, ಎಲ್ಲೋ ಜೀವನ ನಡೆಸುತ್ತಿರಬಹುದು ಆದರೆ ನಾವು ಕಳೆದು ಹೋಗಿರುವ ದಿನಗಳಲ್ಲಿ ಸೈಕಲ್ ಕಲಿಯುವಾಗ ಬಿದ್ದ ಕ್ಷಣಗಳನ್ನಾಗಲಿ, ಸೈಕಲ್ ನಿಂದ ಬಿದ್ದು ಮಾಡಿಕೊಂಡ ಗಾಯಗಳನ್ನಾಗಲಿ ಹೇಗೆ ಮರೆಯಲು ಸಾಧ್ಯ? ಹೌದು ಸ್ನೇಹಿತರೇ ಆ ದಿನ ನಾನು ಮೊದಲ ಬಾರಿಗೆ ಸೈಕಲ್ ಕಲಿಯೋಕೆ ಹೋಗಿ ಪೇಡಲ್ ತುಳಿಯೋಕೆ ಆಗದೆ ಗೊಳಾಡಿದ ರೀತಿ, ಇಳಿಜಾರಿನಲ್ಲಿ ಬ್ರೇಕ್ ಹಿಡಿಯೋಕೆ ಗೊತ್ತಿಲ್ಲದೆ ಸೈಕಲ್ ಹೋಗಿ ಚರಂಡಿಗೆ ಬಿದ್ದು ಕೈ-ಕಾಲು ಗಾಯ ಮಾಡಿಕೊಂಡದನ್ನು ನೆನೆದರೆ ಈಗಲೂ ನಗು ಬರುತ್ತದೆ.
ಅಂದಿನ ದಿನಗಳಲ್ಲಿ ಬಹುತೇಕರ ಮನೆಯಲ್ಲಿ ಹೆಚ್ಚಾಗಿ ಇದ್ದದ್ದು ಅಟ್ಲಾಸ್ ಸೈಕಲ್. ಇದು ಗಂಡು ಮಕ್ಕಳ ಗತ್ತಿಗೂ ಕಾರಣವು ಕೂಡ ಹೌದು. ನಮ್ಮ ಅಪ್ಪನ ಸೈಕಲ್‌ನಲ್ಲಿ ಕಾಲುಗಳು ಎಲ್ಲಿ ಚಕ್ರಕ್ಕೆ ಸಿಲುಕಿ ಬೀಳಬಹುದು ಎಂಬ ಭಯದಿಂದ ದೂರಕ್ಕಿಟ್ಟು ಸೀಟಿನ ಹಿಂಬದಿಯ ಕಬ್ಬಿಣದ ತುಂಡನ್ನು ಗಟ್ಟಿಯಾಗಿ ಹಿಡಿದುಕೊಂಡು ಕೂರುತ್ತಿರುವ ಬಾಲ್ಯ ಅದೆಷ್ಟು ಚಂದ ಅಲ್ವಾ?
ಸೈಕಲ್ ಎಂಬ ಪುಟ್ಟ ಸಾಧನದ ಹಿಂದೆ ಅದೆಷ್ಟು ಮಂದಿಯ ಜೀವನವೇ ಅಡಗಿದೆ. ಸೈಕಲ್ ಮೇಲೆ ಪುಟ್ಟ ಬುಟ್ಟಿಯನ್ನಿಟ್ಟುಕೊಂಡು ಹೂ, ಹಣ್ಣು, ತರಕಾರಿಗಳನ್ನು ಮಾರುವವರು, ಕಿಲೋ ಮೀಟರ್ ಗಟ್ಟಲೆ ತನ್ನ ಸೈಕಲ್ ನಲ್ಲೇ ಹೋಗಿ ಅಂಚೆ ಪತ್ರಗಳನ್ನು ನೀಡುತಿದ್ದ ಪೋಸ್ಟ್‌ಮ್ಯಾನ್, ಹಳ್ಳಿಗಳಲ್ಲಿ ಸರಕಾರ ಕೊಡಿಸಿದ ಸೈಕಲ್ನೇರಿ ಶಾಲೆಗೆ ಹೋಗುವ ಮಕ್ಕಳನ್ನು ನೋಡಬಹುದು.
ಸದ್ಯಕ್ಕೆ ಈಗಿನ ಪರಿಸ್ಥಿತಿ ನೋಡುದಾದರೆ ಜಗತ್ತು ಮತ್ತೆ ಸೈಕಲ್ ಕಡೆಗೆ ಮೊರೆಹೋಗುತ್ತಿದೆ. ಮೋಟಾರ್ ವಾಹನ, ಕಾರುಗಳಿಗೆ ಹಾಕುವ ಪೆಟ್ರೋಲ್ ದುಬಾರಿಯಾಗಿದೆ. ಒಬ್ಬ ದುಡಿದದ್ದು ಕುಟುಂಬದ ಒಂದು ಹೊತ್ತಿನ ಊಟಕ್ಕೂ ಕೂಡ ಸಾಕಾಗದೇ ಇರುವ ಸ್ಥಿತಿ. ಕೊರೊನಾ ಬಂದ ಅನಂತರ ಸಾರ್ವಜನಿಕರು ಸಾರಿಗೆಯಲ್ಲಿ ಹೋಗಲು ಭಯಾಪಟ್ಟು ಎಲ್ಲರೂ ವೈಯಕ್ತಿಕ ಗಾಡಿಗಳ ಕಡೆ ಗಮನ ನೀಡುವುದು ಕಂಡು ಬರುತ್ತಿದೆ.
ಆದರೆ ಎಲ್ಲರ ಬಳಿಯೂ ಮೋಟಾರ್ ವಾಹನ, ಕಾರು ಇಲ್ಲವಲ್ಲ. ಆದ್ದರಿಂದ ಕೆಳವರ್ಗದವರು, ಮಾಧ್ಯಮ ವರ್ಗದವರು ಸೈಕಲ್‌ನಲ್ಲಿ ಕಚೇರಿಗೆ ಹೋಗಿ ಬರಬಹುದು ಎಂದು ಯೋಚಿಸಿ ಆರೋಗ್ಯದ ಕಾರಣದಿಂದ ಸೈಕಲ್ ತುಳಿಯುತ್ತಿದ್ದಾರೆ. ಪ್ರತೀ ದಿನ ಸೈಕಲ್ನಲ್ಲಿ ಕಚೇರಿಗೆ ಹೋಗಿ ಬರುವ ಸಾವಿರಾರು ಜನರನ್ನು ನೋಡಬಹುದು. ಪೆಟ್ರೋಲಿಗೆ ದುಡ್ಡು ಹಾಕಿ ಹಣವೂ ವ್ಯರ್ಥ, ಅದರಿಂದ ಹೊರ ಬರುವ ಹೊಗೆಯಿಂದ ಆರೋಗ್ಯವು ಹಾಳು. ಬದಲಾಗಿ ಮುಂಜಾನೆ ಮತ್ತು ಸಂಜೆ ಸೈಕಲ್ ತುಳಿದರೆ ಆರೋಗ್ಯವು ಚೆನ್ನಾಗಿರುತ್ತೆ ನಮ್ಮ ವಾತಾವರಣವು ಚೆನ್ನಾಗಿರುತ್ತೆ.
-ಚೆಲುವಮ್ಮ
ಎಸ್.ಡಿ.ಎಂ., ಉಜಿರೆ