ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಡಿಯೋ ಸಂಸ್ಥೆ “ಲಹರಿ ಮ್ಯೂಸಿಕ್’ಗೆ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ. ಇನ್ನು “ಲಹರಿ ಮ್ಯೂಸಿಕ್’ ಲೇಬಲ್‌ನಲ್ಲಿ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ “ಡಿವೈನ್ ಟೈಡ್ಸ್’ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ.
ಒಂದೆಡೆ ಲಹರಿಗೆ ಸುವರ್ಣ ಮಹೋತ್ಸವ ಎದುರು ನೋಡುತ್ತಿರುವ ಸಂಭ್ರಮ, ಮತ್ತೂಂದೆಡೆ ಗ್ರ್ಯಾಮಿ ಪ್ರಶಸ್ತಿಯ ಖುಷಿ. ಇವೆರಡನ್ನು ಹಂಚಿಕೊಳ್ಳುವ ಸಲುವಾಗಿ “ಲಹರಿ ಮ್ಯೂಸಿಕ್’ನ ವೇಲು ಮತ್ತು ರಿಕ್ಕಿ ಕೇಜ್ ಪತ್ರಿಕಾಗೋಷ್ಟಿ ಆಯೋಜಿಸಿದ್ದರು.
ಇದೇ ವೇಳೆ ಮಾತನಾಡಿದ ಲಹರಿ ವೇಲು, “ಕೇವಲ ಐನ್ನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ಎಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ “ಡಿವೈನ್ ಟೈಡ್ಸ್’ ಆಲ್ಬಂ ಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಸದ್ಯದಲ್ಲೇ ರಿಕ್ಕಿ ಕೇಜ್ ಸಂಗೀತ ನಿರ್ದೇಶನದಲ್ಲಿ ಉತ್ತಮ ಸಿನಿಮಾವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ’ ಎಂದು ತಿಳಿಸಿದರು.
ಇದನ್ನೂ ಓದಿ:ಸತತ ಸೋಲಿನ ನಡುವೆ ಆಘಾತ: ಐಪಿಎಲ್ ಕೂಟದಿಂದ ಹೊರಬಿದ್ದ ಸಿಎಸ್ ಕೆ ಬೌಲರ್ ದೀಪಕ್ ಚಾಹರ್
ಇನ್ನು ಗ್ರ್ಯಾಮಿ ಪ್ರಶಸ್ತಿಯ ಬಗ್ಗೆ ಮಾತನಾಡಿದ ರಿಕ್ಕಿ ಕೇಜ್, “ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಕೋವಿಡ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್‌ಗಳ ಮೂಲಕ ಸಂಪರ್ಕ ಮಾಡಿದ್ದೆ. ಸುಮಾರು ಅರವತ್ತಕ್ಕೂ ಅಧಿಕ ಮಂದಿ ಭಾರತೀಯರು ಉಳಿದಂತೆ ವಿದೇಶದವರು ಸೇರಿದಂತೆ, ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರಾ ಮುಂತಾದ ಕಲಾವಿದರು ಈ ಆಲ್ಬಂನಲ್ಲಿದ್ದಾರೆ. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಹೆಚ್ಚು ಆಸಕ್ತಿ’ ಎಂದರು