Advertisement

ಹಳ್ಳಹಿಡಿದ ಸಂಪತ್ತು, ಜಲಮೂಲಕ್ಕೆ ಆಪತ್ತು ; ಮರಳು ಎತ್ತುವ ದಂಧೆ ಅವ್ಯಾಹತ

01:39 PM Oct 08, 2022 | Team Udayavani |

ಧಾರವಾಡ: ಯಾವ ದೈತ್ಯ ನದಿಗೂ ಕಡಿಮೆ ಇಲ್ಲದಷ್ಟು ಜಲಸಂಪನ್ಮೂಲ ಹೊತ್ತು ಹರಿಯುವ ಚಿಕ್ಕಣ್ಣರು, ಪಶುಪಕ್ಷಿಗಳ ಆರೈಕೆಗೆ ಒಡಲಾದ ಹಳ್ಳಗಳು, ಸೃಷ್ಟಿಯ ಸೊಬಗು ರೂಪಿಸಿದ ಹಳ್ಳಗಳನ್ನು ನುಂಗಿದ ನುಂಗಣ್ಣರು, ಸರ್ಕಾರ ಈವರೆಗೂ ನಡೆಸಿಯೇ ಇಲ್ಲ ಸಮೀಕ್ಷೆ, ನುಂಗಣ್ಣರಿಂದಲೂ ಉಪೇಕ್ಷೆ. ಒಟ್ಟಲ್ಲಿ ಹಳ್ಳಗಳ ಒಡಲು ಕಳ್ಳಕಾಕರ ದಂಧೆಗಳಿಗೆ ಮಡಿಲು. ಹೌದು, ಜಿಲ್ಲೆಯಲ್ಲಿ ಜೀವವೈವಿಧ್ಯಕ್ಕೆ ಆಸರೆಯಾಗಿರುವ ಬೇಡ್ತಿ, ಸಣ್ಣಹಳ್ಳ, ದೊಡ್ಡಹಳ್ಳ, ಜಾತಕ್ಯಾನ ಹಳ್ಳ, ಬೆಣ್ಣೆ ಹಳ್ಳ, ತುಪರಿ ಹಳ್ಳ, ರಾಡಿ ಹಳ್ಳ, ಕಾಗಿನ ಹಳ್ಳ, ಕೊರಕಲಹಳ್ಳ ಸೇರಿದಂತೆ 23ಕ್ಕೂ ಅಧಿಕ ಹಳ್ಳಗಳಿವೆ. ಇವುಗಳು ಒಟ್ಟು ಉದ್ದ ಅಂದಾಜು 380 ಕಿಮೀ ಆಗಬಹುದು.

Advertisement

ಆದರೆ ಇವೆಲ್ಲವೂ ಅತಿಕ್ರಮಣಕ್ಕೆ ಒಳಗಾಗಿದ್ದು, ಸಮೀಕ್ಷೆ ಕಾರ್ಯ ನಡೆಯುತ್ತಲೇ ಇಲ್ಲ. ಅವುಗಳಲ್ಲಿನ ಜಲಸಂಪನ್ಮೂಲ ಬಳಸಿ ನೀರಾವರಿ ಮತ್ತು ಕುಡಿಯಲು ಬಳಕೆ ಮಾಡುವ ಯೋಜನೆಗಳನ್ನು ರೂಪಿಸುತ್ತಿಲ್ಲ. ಜಿಲ್ಲೆಗೆ ಯಾವುದೇ ನದಿಗಳು ಇಲ್ಲದೇ ಹೋದರೂ 23 ಹಳ್ಳಗಳಲ್ಲಿ ಅಂದಾಜು 30 ಟಿಎಂಸಿ ಅಡಿ ನೀರು ಹರಿದು ಹೋಗುತ್ತದೆ. ಆದರೆ ಇಂತಿರುವ ಹಳ್ಳಗಳ ಬಗ್ಗೆಯೇ ಜಿಲ್ಲಾಡಳಿತ, ಜಿಪಂ ಮತ್ತು ಸ್ಥಳೀಯ ಗ್ರಾಪಂ ಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದು, ಅತಿಕ್ರಮಣಕಾರರು ಮತ್ತು ಲೂಟಿ ಮಾಡುವವರಿಗೆ ಮುಕ್ತ ವಾತಾವರಣ ಸಿಕ್ಕಂತಾಗಿದೆ.

380 ಕಿಮೀ ಹಳ್ಳಗಳು
ಜಿಲ್ಲೆಯಲ್ಲಿ ಅಂದಾಜು ಒಟ್ಟು 380 ಕಿಮೀ ಉದ್ದದಷ್ಟು ಹಳ್ಳಗಳ ಹರಿವು ಇರುವುದು ಕಂದಾಯ ಇಲಾಖೆ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಬೇಡ್ತಿ ಜಿಲ್ಲೆಯಲ್ಲಿ 29 ಕಿಮೀನಷ್ಟು ಉದ್ದ ಹರಿದರೆ, ಬೆಣ್ಣೆಹಳ್ಳ ಜಿಲ್ಲೆಯಲ್ಲಿ 35 ಕಿಮೀಗೂ ಅಧಿಕ ಉದ್ದ ಹರಿದಿದೆ. ಇನ್ನುಳಿದಂತೆ ಶಾಲ್ಮಲಾ ಹಳ್ಳ ಕೂಡ 20 ಕಿಮೀ ಹರಿವು ಹೊಂದಿದ್ದು, ಉಳಿದ ಎಲ್ಲಾ ಹಳ್ಳಗಳು 10ರಿಂದ 15 ಕಿಮೀವರೆಗೂ ಹರಿವು ಹೊಂದಿವೆ. ಹೀಗೆ ಎಲ್ಲಾ ಹಳ್ಳಗಳ ಒಟ್ಟು ಹರಿಯುವ ಉದ್ದ ಅಂದಾಜು 380 ಕಿಮೀ ಆಗಿದೆ. ಸದ್ಯಕ್ಕೆ ಈ ಹಳ್ಳಗಳ ಸಮೀಕ್ಷೆ ನಡೆದರೆ ಅವುಗಳ ನಿಜವಾದ ಉದ್ದ ಮತ್ತು ಅಗಲ ಎಷ್ಟು ಎಂಬುದು ಪತ್ತೆಯಾಗುತ್ತದೆ.

ಸಂಪತ್ತು ಲೂಟಿ
ಇನ್ನು ಜಿಲ್ಲೆಯಲ್ಲಿನ ಹಳ್ಳಗಳು ಬರೀ ನೀರು ಹರಿಯುವ ಕೊಳ್ಳಗಳಾಗಿಲ್ಲ. ಬದಲಿಗೆ ಮರಳು, ಕಲ್ಲು, ಕಟ್ಟಿಗೆ ಮತ್ತು ಉತ್ತಮ ಗುಣಮಟ್ಟದ ಮಣ್ಣನ್ನು ಹೊತ್ತು ನಿಂತಿವೆ. ಹೀಗಾಗಿ ಸ್ಥಳೀಯವಾಗಿ ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ನವಲಗುಂದ, ಧಾರವಾಡ ತಾಲೂಕಿನ ಪೂರ್ವ ಭಾಗ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನಲ್ಲಿನ ಹಳ್ಳಗಳಲ್ಲಿ ಕರಿ ಉಸುಕು ಯಥೇಚ್ಚವಾಗಿ ಸಿಗುತ್ತದೆ. ಇದನ್ನು ಬೇಕಾಬಿಟ್ಟಿಯಾಗಿ ತುಂಬಿ ಪೇಟೆಗೆ ಸಾಗಾಟ ಮಾಡಲಾಗುತ್ತಿದೆ. 2017ರಲ್ಲಿ ಸರ್ಕಾರ ಹಳ್ಳಗಳಲ್ಲಿನ ಉಸುಕು ಎತ್ತುವುದಕ್ಕೆ ನಿರ್ಬಂಧ ಹೇರಿತ್ತು. ಜಿಲ್ಲಾಡಳಿತ ಕೂಡ ಇದನ್ನು ಕಠಿಣ ನಿಲುವಾಗಿ ಪರಿಗಣಿಸಿತ್ತು. ಆದರೆ ಇಂದು ಮತ್ತೆ ಮರಳು ಎತ್ತುವ ಕಳ್ಳಕಾಕರ ದರ್ಬಾರ್‌ ಜೋರಾಗಿ ನಡೆದಿದೆ.

ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನ ಪಶ್ಚಿಮ ಭಾಗದಲ್ಲಿನ ಹಳ್ಳಗಳಲ್ಲಿ ಹೊಂಗೆ, ಹುಣಸೆ, ನೇರಳೆ ಸೇರಿದಂತೆ ದೈತ್ಯ ಗಿಡಮರಗಳಿವೆ. ಹಳ್ಳದ ಅಕ್ಕಪಕ್ಕದ ರೈತರು ಈ ಗಿಡಮರಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಇಟ್ಟಿಗೆ ಭಟ್ಟಿಗೆ ಬೇಕಾಗುವ ಉರುವಲಿಗೆ ಈ ಹಳ್ಳಗಳಲ್ಲಿನ ಗಿಡಮರಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಇನ್ನು ಇಲ್ಲಿ ಕೆಂಪು ಮರಳು, ಮಣ್ಣು ಗುತ್ತಿಗೆದಾರರು ಹಾಡುಹಗಲೇ ಲೂಟಿ ಹೊಡೆಯುತ್ತಿದ್ದಾರೆ.

Advertisement

ಜಲಸಂಪನ್ಮೂಲ ಬಳಕೆ ಆಗಿಲ್ಲ
ಜಿಲ್ಲೆಯಲ್ಲಿ ಟಿಎಂಸಿ ಅಡಿಗಟ್ಟಲೇ ನೀರು ಪ್ರತಿವರ್ಷ ಸುಖಾಸುಮ್ಮನೆ ಹರಿದು ಹೋಗುತ್ತಿದ್ದರೂ ಅದನ್ನು ನಾಗರಿಕ ಬಳಕೆ ಮತ್ತು ನೀರಾವರಿಗೆ ಒಳಸಿಕೊಳ್ಳುವ ಪ್ರಮಾಣ ಶೇ.10 ಮಾತ್ರ ಇದೆ. ಜಿಲ್ಲೆಯಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಅದೇ ನೀರಿನಿಂದ ನೀರಾವರಿ ಮಾಡಿಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದರೂ ಅದು ಬಳಕೆಯಾಗುತ್ತಿಲ್ಲ. ಬೇಡ್ತಿಹಳ್ಳಕ್ಕೆ 120ಕ್ಕೂ ಅಧಿಕ ಚೆಕ್‌ಡ್ಯಾಂಗಳನ್ನು ಕಟ್ಟಲು ಅವಕಾಶವಿದ್ದರೂ ಇಲ್ಲಿ ಕಟ್ಟಿರುವುದು ಬರೀ 30 ಚೆಕ್‌ ಡ್ಯಾಂಗಳು ಮಾತ್ರ. ಬೆಣ್ಣೆಹಳ್ಳದಲ್ಲಿಯೇ ಬರೋಬ್ಬರಿ 22 ಟಿಎಂಸಿ ಅಡಿ ನೀರು ಹರಿದು ಹೋಗುತ್ತದೆ ಎಂದು ಡಾ| ಪರಮಶಿವಯ್ಯ ಅವರ ವರದಿ ಉಲ್ಲೇಖ ಮಾಡಿದೆ. ಅಷ್ಟೇಯಲ್ಲ, ತುಪರಿ ಹಳ್ಳದ ನೀರನ್ನು ಕೆರೆಗಳಿಗೆ ಏತ ನೀರಾವರಿ ಮೂಲಕ ಹರಿಸಲು 5 ಕೋಟಿ ರೂ. ಗಳಿಗೂ ಅಧಿಕ ಹಣ ವ್ಯಯಿಸಲಾಗಿದೆ. ಆದರೆ ಯೋಜನೆ ಇನ್ನು ಜಾರಿಯಾಗಿಲ್ಲ.

ಬೆಣ್ಣೆಹಳ್ಳದ ಬಳಕೆ ಕುರಿತು ದಿವ್ಯ ನಿರ್ಲಕ್ಷ್ಯವೇ ಮುಂದುವರಿದಿದೆ. ಕಾಗಿನಹಳ್ಳ, ಜಾತಕ್ಯಾನಹಳ್ಳ, ಡೊಂಕಹಳ್ಳ, ಡೋರಿಹಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಚೆಕ್‌ಡ್ಯಾಂ ಮಾತ್ರವಲ್ಲ, ಕೆರೆಗಳನ್ನೇ ನಿರ್ಮಿಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಜೀವ ವೈವಿಧ್ಯದ ಒಡಲು
ಜಿಲ್ಲೆಯ ಹಳ್ಳಗಳೆಲ್ಲವೂ ಜೀವ ವೈವಿಧ್ಯದ ತಾಣವಾಗಿದ್ದು, ಇಲ್ಲಿನ ಪ್ರತಿಯೊಂದು ಹಳ್ಳಗಳು ನೂರಾರು ಪಕ್ಷಿ ಪ್ರಬೇಧ ಮತ್ತು ಸರಿಸೃಪಗಳ ನೆಲೆಯಾಗಿ ನಿಂತಿವೆ. ಹಾರ್ನ್ ಬಿಲ್‌ನಂತಹ ದೈತ್ಯ ಮತ್ತು ಅಪರೂಪದ ಪಕ್ಷಿಗಳಿಂದ ಹಿಡಿದು ಹಳದಿ ಮತ್ತು ನೀಲಿ ಗುಬ್ಬಿವರೆಗೆ ಎಲ್ಲಾ ಬಗೆಯ ಪಕ್ಷಿಗಳಿಗೂ ಜಿಲ್ಲೆಯ ಹಳ್ಳಗಳೇ ಇಂದು ಆಸರೆಯಾಗಿವೆ. ಆದರೆ ಕಬ್ಬು ಬೆಳೆಗಾಗಿ ರೈತರು ಹಳ್ಳಗಳ ಅಕ್ಕಪಕ್ಕದ ಗಿಡಗಂಟೆಗಳನ್ನು ಕಿತ್ತು ಹಾಕುತ್ತಿದ್ದು, ಹಳ್ಳಗಳನ್ನೇ ಅತಿಕ್ರಮಣ ಮಾಡುತ್ತಿದ್ದಾರೆ.

ಹಳ್ಳಗಳ ಸಮೀಕ್ಷೆಯನ್ನು ಭೌತಿಕವಾಗಿ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಜಿಐಎ ಅಥವಾ ಸೆಟ್‌ ಲೈಟ್‌ ಮೂಲಕವೇ ಸಮೀಕ್ಷೆ ನಡೆಸುವ ಯೋಜನೆಯೊಂದನ್ನು ಸಿದ್ಧಗೊಳಿಸಿದ್ದೇವೆ. ಶೀಘ್ರವೇ ಹಳ್ಳಗಳ ಹದ್ದುಬಸ್ತನ್ನು ಮಾಡುತ್ತೇವೆ. ಹಳ್ಳಗಳ ಸಂರಕ್ಷಣೆಗೆ ಜಿಪಂ ಮತ್ತು ಜಿಲ್ಲಾಡಳಿತ ಒಟ್ಟಾಗಿ ಕೆಲಸ ಮಾಡಲಿದೆ.
*ಡಾ| ಸುರೇಶ ಇಟ್ನಾಳ, ಜಿಪಂ ಸಿಇಒ

ಬೆಣ್ಣೆಹಳ್ಳ ಸೇರಿದಂತೆ ಅನೇಕ ಹಳ್ಳಗಳ ಅತಿಕ್ರಮಣವಾಗಿದೆ. ಇವುಗಳ ರಕ್ಷಣೆಯಿಂದ ಜೀವಜಗತ್ತು ಮಾತ್ರವಲ್ಲ, ರೈತರಿಗೂ ಅನುಕೂಲವಾಗುತ್ತದೆ. ಹೀಗಾಗಿ ಕೂಡಲೇ ಹಳ್ಳಗಳ ಸಂರಕ್ಷಣೆಗೆ ಜಿಲ್ಲಾಡಳಿತ ಕಠಿಣ ನಿರ್ಧಾರ ತೆಗೆದುಕೊಂಡು ಅತಿಕ್ರಮಣ ತಡೆಯಬೇಕು.
*ದೇವರಾಯಪ್ಪ ಬಸವರೆಡ್ಡಿ, ರೈತ ಮುಖಂಡ, ಬ್ಯಾಲ್ಯಾಳ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next