ಕ್ವೀನ್ಸ್ ಟೌನ್: ವಿಕೆಟ್ ಕೀಪರ್- ಬ್ಯಾಟರ್ ರಿಚಾ ಘೋಷ್ ವೇಗದ ಅರ್ಧಶತಕದ ಹೊರತಾಗಿಯೂ ನ್ಯೂಜಿಲ್ಯಾಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲೂ ಭಾರತ ವನಿತೆಯರು ಸೋಲನುಭವಿಸಿದ್ದಾರೆ. ಇದರೊಂದಿಗೆ ಆಡಿದ ನಾಲ್ಕೂ ಪಂದ್ಯಗಳಲ್ಲೂ ಮಿಥಾಲಿ ಪಡೆ ಸೋಲು ಕಂಡಿದೆ.
ಮಳೆಯ ಕಾರಣದಿಂದ 20 ಓವರ್ ಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಕಿವೀಸ್ ಮೊದಲು ಬ್ಯಾಟಿಂಗ್ ಮಾಡಿ ಐದು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದರೆ, ಭಾರತ ಮಹಿಳಾ ತಂಡ 17.5 ಓವರ್ ಗಳಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಿವೀಸ್ ಪರ ಅಮೆಲಾ ಕೆರ್ರ್ 33 ಎಸೆತಗಳಲ್ಲಿ 68 ರನ್ ಗಳಿಸಿದರೆ, ಬೇಟ್ಸ್ 41 ರನ್, ನಾಯಕಿ ಸೋಫಿ ಡಿವೈನ್ 32 ರನ್ ಗಳಿಸಿದರು. ಭಾರತದ ಪರ ರೇಣುಕಾ ಸಿಂಗ್ ಎರಡು ವಿಕೆಟ್ ಮತ್ತು ಮೇಘನಾ, ರಾಜೇಶ್ವರಿ, ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ಭಾರತ ತಂಡ ಸತತ ವಿಕೆಟ್ ಕಳೆದುಕೊಂಡಿತು. 19 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಭರ್ಜರಿಯಾಗಿ ಬ್ಯಾಟ್ ಬೀಸಿದ ವಿಕೆಟ್ ಕೀಪರ್ ರಿಚಾ ಘೋಷ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದ ರಿಚಾ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಭಾರತದ ವನಿತಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ಇದನ್ನೂ ಓದಿ:ಮಾತಿನ ಮಲ್ಲಿ ಆರ್ ಜೆ ರಚನಾ ಹೃದಯಾಘಾತದಿಂದ ನಿಧನ
ನಾಯಕಿ ಮಿಥಾಲಿ ರಾಜ್ 30 ರನ್ ಮತ್ತು ಸ್ಮೃತಿ ಮಂಧನಾ 13 ರನ್ ಹೊರತು ಪಡಿಸಿ ಉಳಿದ ಯಾರೂ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ಕಿವೀಸ್ ಪರ ಜೆನ್ಸನ್ ಮತ್ತು ಕೆರ್ರ್ ತಲಾ ಮೂರು ವಿಕೆಟ್ ಕಿತ್ತರೆ, ಮೆಕಾಯ್ ಮತ್ತು ಜೆಸ್ ಕೆರ್ರ್ ತಲಾ ಎರಡು ವಿಕೆಟ್ ಪಡೆದರು.