ಪಡುಬಿದ್ರಿ: ಸಮೃದ್ಧ ಶಿಕ್ಷಣದಿಂದ ಪ್ರಾವಿಣ್ಯತೆಯನ್ನು ಹೊಂದಿರಿ. ನೀವು ಬೆಳೆದು ಬಂದಿರುವ ಸಮಾಜ ಹಿನ್ನೆಲೆ, ಶಿಕ್ಷಕರು ಹಾಗೂ ಹೆತ್ತವರನ್ನು ಮರೆಯದಿರಿ. ಎಳವೆಯಲ್ಲಿಯೇ ಸಂಸ್ಕಾರ, ಸಂಸ್ಕೃತಿಯನ್ನು ವಿದ್ಯಾರ್ಥಿಗಳೂ ಆರ್ಜಿಸಿಕೊಳ್ಳಬೇಕೆಂದು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಹೊಸಬೆಟ್ಟು ಅವರು ಕರೆ ನೀಡಿದರು.
ಅವರು ಆ. 27ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿà ದೇವಸ್ಥಾನದ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಿಳಾ ಮಹಾಜನ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಪು ನಾಲ್ಕುಪಟ್ಣ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಸುವರ್ಣ ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ವೀ ಮೆಟ್ಟಲಾದ ಸಾಧನೆಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದರು.
ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.85 ಕ್ಕಿಂತ ಪ್ರತಿಭಾವಂತ 63 ವಿದ್ಯಾರ್ಥಿಗಳಿಗೆ ಸುಮಾರು 70,000ರೂ. ಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಸೆಸೆಲ್ಸಿಯಲ್ಲಿ 98.5 ಶೇಕಡಾ ಅಂಕ ಗಳಿಸಿರುವ ಅನ್ವಿತಾ ಡಿ. ಶ್ರೀಯಾನ್ ಹಾಗೂ ಪಿಯುಸಿಯಲ್ಲಿ 96.5ಶೇಕಡಾ ಅಂಕ ಗಳಿಸಿದ ಆದಿತ್ಯ ಹೊಸಬೆಟ್ಟು ಅವರನ್ನು ಸಮ್ಮಾನಿಸಲಾಯಿತು.
ದ.ಕ.ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳಾದ ಎನ್.ಡಿ.ಬಂಗೇರ, ದಿನೇಶ್ ಕೋಟ್ಯಾನ್, ವೇದವ್ಯಾಸ ಬಂಗೇರ, ಮೊಗವೀರ ಮಹಿಳಾ ಮಹಾಜನ ಸಂಘದ ಉಪಾಧ್ಯಕ್ಷೆ ಗುಲಾಬಿ, ಲೀಲಾವತಿ ಮೆಂಡನ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಸರಳಾ ಕಾಂಚನ್ ಸ್ವಾಗತಿಸಿದರು. ಉಷಾ ದಿನಕರ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೇವಂತಿ ಸದಾಶಿವ್ ವಂದಿಸಿದರು.