ಕಾರಟಗಿ: ತಾಲೂಕಿನ ಕಾರಟಗಿ ಮತ್ತು ಕನಕಗಿರಿ ಮಧ್ಯದಲ್ಲಿನ ನವಲಿ ಬಳಿ ನಿರ್ಮಾಣಗೊಳ್ಳುತ್ತಿರುವ ಮಹತ್ವಾಕಾಂಕ್ಷಿ ರೈಸ್ ಪಾರ್ಕ್ ಯೋಜನೆಯ ಅಭಿವೃದ್ಧಿ ಹಾಗೂ ರಸ್ತೆ, ಕಟ್ಟಡ ಸೇರಿ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಭರದಿಂದ ಸಾಗಿದ್ದು, ಶುಕ್ರವಾರ ಶಾಸಕ ಬಸವರಾಜ, ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಟ್ಟು 315 ಎಕರೆ ಪ್ರದೇಶದ ಈ ರೈಸ್ ಪಾರ್ಕ್ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಒಟ್ಟು 120 ಕೋಟಿ ವೆಚ್ಚದಲ್ಲಿ ಕಟ್ಟಡಗಳು, ರಸ್ತೆ, ಕಾಂಪೌಂಡ್, ವಾಣಿಜ್ಯ ಸಂಕೀರ್ಣಗಳು, ಬೃಹತ್ ಗೋಡೌನ್‌ಗಳ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ಇನ್ನು ಮುಖ್ಯವಾಗಿ ಇಲ್ಲಿ ಹೂಡಿಕೆಗೆ ಮುಂದೆ ಬರುವ ಕಾರ್ಖಾನೆಗಳಿಗೆ, ಸಂಸ್ಕರಣಾ ಘಟಕಗಳ ಬಳಕೆಗೆ ಬೃಹತ್ ಕೆರೆ ಕುರಿತು ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಈಗಾಗಲೇ ಉನ್ನತ ಮಟ್ಟದ ಇಲಾಖಾ ಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ಸೇರಲಾಗಿತ್ತು. ಸಭೆಯಲ್ಲಿ ರೈಸ್ ಟೆಕ್ ಪಾರ್ಕ್‌ನಲ್ಲಿ ಅಕ್ಕಿ ಮತ್ತು ಅಕ್ಕಿಯ ಉಪ ಉತ್ಪನ್ನಗಳಾದ ಅಕ್ಕಿ ಹಿಟ್ಟು ,ರವೆ, ಅಕ್ಕಿ ತೌಡು , ಎಣ್ಣೆ, ನೂಡಲ್ಸ್ , ಅಕ್ಕಿ ಆಧಾರಿತ ಪಾನೀಯಗಳು, ಪಶು ಮತ್ತು ಕುಕ್ಕುಟ ಆಹಾರ ವಿಭಾಗ ಮತ್ತು ಭತ್ತದ ತೌಡಿನಿಂದ ವಿದ್ಯುತ್ ಉತ್ಪಾದನೆ ಹಾಗೂ ಇಟ್ಟಿಗೆ ತಯಾರಿಕಾ ಕಾರ್ಖಾನೆಗಳು ತಲೆ ಎತ್ತಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲಿದ್ದು, ಜೊತೆಗೆ ಚಿಲ್ಲರೆ ವರ್ತಕರು, ದಾಸ್ತಾನುಗಾರರು, ಸಾಗಾಣಿಕಾ ಕಂಪನಿಗಳು, ಪ್ಯಾಕಿಂಗ್ ಸಂಸ್ಥೆಗಳು ತಲೆ ಎತ್ತಲಿದ್ದು, ಈ ಎಲ್ಲ ಉದ್ಯಮಗಳಿಗೆ ಬಂಡವಾಳ ಹೂಡಲು ಅನುಕೂಲ ಕಲ್ಪಿಸಲಾಗುತ್ತದೆ.
ಒಟ್ಟಾರೆಯಾಗಿ ಭತ್ತದ ಬೆಳೆಗೆ ಮತ್ತಷ್ಟು ಮೌಲ್ಯವನ್ನು ವರ್ಧನೆ ತರುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷಿ ಈ ರೈಸ್ ಪಾರ್ಕ್ ಯೋಜನೆ ಹೊಂದಿದೆ ಎಂದರು. ಎಸಿ ಕೆ. ನಾರಾಯಣರೆಡ್ಡಿ, ತಹಶೀಲ್ದಾರ್, ಶಿವಶರಣಪ್ಪ ಕಟ್ಟೋಳಿ, ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ, ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಸದಸ್ಯ ನಾಗರಾಜ್ ಅರಳಿ ಇನ್ನಿತರರು ಇದ್ದರು.