ಧಾರವಾಡ: ಜಿಲ್ಲೆಯ 2.70 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಹಿಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದರು. ಈ ಕುರಿತು ಸೋಮವಾರ “ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ 21 ಮಿ.ಮೀ. ಮಳೆಯಾಗಬೇಕಿತ್ತು.
ಆದರೆ 50 ಮಿ.ಮೀ. ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಹಿಂಗಾರಿ ಬೆಳೆಗಳನ್ನು ಬಿತ್ತುವ ರೈತರಿಗೆ ಅಗತ್ಯವಾದ ಬೀಜ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಪ್ರತಿವರ್ಷ ಹಿಂಗಾರಿಗೆ 1.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, ಜೋಳ, ಗೋಧಿ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತದೆ.
ಆದರೆ ಈ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಬಿತ್ತನೆಯಾಗದೇ ಇರುವ 80 ಸಾವಿರ ಹೆಕ್ಟೇರ್ ಪ್ರದೇಶವಿದ್ದು, ಒಟ್ಟು 2.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಪೈಕಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಗುರಿ ಇದ್ದು, ಕಳೆದ ವರ್ಷ ಇದು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಈ ವರ್ಷ ಜೋಳ 48 ರಿಂದ 76 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವ ಸಾಧ್ಯತೆ ಇದ್ದು, ಗೋಧಿ 28ರಿಂದ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಇನ್ನುಳಿದಂತೆ ಹಿಂಗಾರಿಗೆ ಕುಸುಬಿ 15 ಸಾವಿರ ಹೆಕ್ಟೇರ್ ಪ್ರದೇಶ, ಅವರೆ, ನೀರಾವರಿ ಆಧಾರಿತ ಗೋವಿನ ಜೋಳ, ಕರಿ ಹೆಸರು, ಅಗಸಿ ಬಿತ್ತನೆ ನಡೆಯಲಿದೆ ಎಂದರು.
ಅಗತ್ಯ ಬೀಜ, ಸಬ್ಸಿಡಿಗೆ ಸಿದ್ಧತೆ: ಇನ್ನು ಹಿಂಗಾರಿಗೆ ಅಗತ್ಯವಾದ ಬಿತ್ತನೆ ಬೀಜದ ವ್ಯವಸ್ಥೆ ಮಾಡಿಕೊಂಡಿದ್ದು 10 ಸಾವಿರ ಕ್ವಿಂಟಲ್ ಬೀಜ ಸಿದ್ದವಾಗಿದೆ.ಸೆ.12ರಿಂದಲೇ ಜಿಲ್ಲಾದ್ಯಂತ ಬೀಜ ವಿತರಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 28 ಕೇಂದ್ರಗಳ ಮೂಲಕ ಬೀಜ ಪೂರೈಕೆಯಾಗಲಿದ್ದು, ಅಗತ್ಯ ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಕಡಲೆ ಕೆಜಿಗೆ ಬೆಲೆ 83 ರೂ. ಇದ್ದು 25 ರೂ. ಸಬ್ಸಿಡಿ ನೀಡಲಾಗುತ್ತಿದೆ.
ಇನ್ನುಳಿದಂತೆ ಜೋಳ 40 ರೂ. ಕೆ.ಜಿ. ಇದ್ದು 20 ರೂ. ಸಬ್ಸಿಡಿ ಇದ್ದು ರೈತರು ಬೀಜ ಖರೀದಿಗೆ ಮುಂದಾಗುವಂತೆ ಸಲಹೆ ನೀಡಿದರು. ಇದೇ ವೇಳೆ ಜಿಲ್ಲೆಯ ರೈತರಿಗೆ ಬರಬೇಕಾಗಿರುವ ಬೆಳೆವಿಮೆ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಬ್ಯಾಂಕ್‌ಗಳಿಗೆ, ವಿಮಾ ಕಂಪನಿ ಮತ್ತು ಸರ್ಕಾರದ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರ ಬೆಳೆವಿಮೆ ಹಣ ರೈತರ ಖಾತೆಗೆ ಬರಲಿದೆ ಎಂದು ಕೃಷಿ ಅಧಿಕಾರಿ ರುದ್ರೇಶಪ್ಪ ತಿಳಿಸಿದ್ದಾರೆ.