Advertisement

ಅಕ್ಕಿ ಸ್ವಾವಲಂಬನೆ ಸಾಧ್ಯ; ರಾಜ್ಯದಲ್ಲೇ ಲಭ್ಯವಿದೆ ಅನ್ನಭಾಗ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿ

12:29 AM Jun 17, 2023 | Team Udayavani |

ಬೆಂಗಳೂರು: ಸರಕಾರ ಬಗಲಲ್ಲಿ ಬೆಣ್ಣೆ ಇರಿಸಿ ಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುತ್ತಿದೆಯೇ?

Advertisement

“ಹೌದು” ಎನ್ನುತ್ತಾರೆ ಅಕ್ಕಿ ಗಿರಣಿ ಗಳ ಮಾಲಕರ ಸಂಘ ಹಾಗೂ ರೈತ ಮುಖಂಡರು.

ತನ್ನ ಮಹತ್ವಾಕಾಂಕ್ಷಿ ಯೋಜನೆ “ಅನ್ನಭಾಗ್ಯ’ಕ್ಕೆ ಅಗತ್ಯವಿರುವ ಅಕ್ಕಿ ಹೊಂದಿಸಲು ಸರಕಾರವು ಅನ್ಯ ರಾಜ್ಯಗಳತ್ತ ಮುಖ ಮಾಡಿದೆ. ಆದರೆ ಅದೇ ಗುಣಮಟ್ಟದ ಮತ್ತು ಅಷ್ಟೇ ದರದಲ್ಲಿ ಅಗತ್ಯವಿರುವಷ್ಟು ಪ್ರಮಾಣದ ಅಕ್ಕಿ ಸದ್ಯ ರಾಜ್ಯದಲ್ಲೇ ಲಭ್ಯವಾಗಲಿದೆ. ಇದಕ್ಕಾಗಿ ಸರಕಾರ ಮನಸ್ಸು ಮಾಡಬೇಕಷ್ಟೇ. ಇದು ಪ್ರತೀ ತಿಂಗಳು ಲಭ್ಯವಾಗುವುದು ಕಷ್ಟ

ವೆನಿಸಿದರೂ ಬೀಸುವ ದೊಣ್ಣೆಯಿಂ ದಂತೂ ಸರಕಾರವನ್ನು ಪಾರು ಮಾಡುವುದರಲ್ಲಿ ಅನುಮಾನವಿಲ್ಲ.

“ಪೂರ್ವಸಿದ್ಧತೆಯಲ್ಲಿ ಈಗಾ ಗಲೇ ವಿಳಂಬವಾಗಿದೆ. ಹಾಗೆಂದು ಈಗಲೂ ಕಾಲ ಮಿಂಚಿಲ್ಲ. ತತ್‌ಕ್ಷಣ ಅಕ್ಕಿಗಿರಣಿ ಮಾಲಕರು ಮತ್ತು ರೈತ ಮುಖಂಡರೊಂದಿಗೆ ಸಮಾ ಲೋಚನೆ ನಡೆಸಿ ಉತ್ತಮ ಬೆಲೆ ನೀಡಲು ಸರಕಾರ ಮುಂದಾದರೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆ ಗಳಿಂದಲೇ 3ರಿಂದ 4 ಲಕ್ಷ ಮೆಟ್ರಿಕ್‌ ಟನ್‌ ಭತ್ತ ದೊರೆಯುತ್ತದೆ. ಅದನ್ನು ಸಂಸ್ಕರಿಸಿದರೆ ಅನಾಯಾಸವಾಗಿ 2 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ಅಕ್ಕಿ ದೊರೆಯಲಿದೆ. ಇದನ್ನು ಸಾರಿಗೆ ವೆಚ್ಚವೂ ಸೇರಿದಂತೆ ಕೆ.ಜಿ.ಗೆ 34-35 ರೂ.ಗಳಲ್ಲೇ ಒದಗಿಸ ಬಹುದು’ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲಕರ ಸಂಘದ ಉಪಾಧ್ಯಕ್ಷ ಕೆ.ವಿ. ಪ್ರಸನ್ನ ತಿಳಿಸಿದ್ದಾರೆ.

Advertisement

“ನಮ್ಮಲ್ಲಿ ಉತ್ಪಾದನೆಯಾದ ಶೇ. 50ಕ್ಕಿಂತ ಹೆಚ್ಚು ಅಕ್ಕಿ ತಮಿಳುನಾಡು, ಕೇರಳ ಸಹಿತ ನೆರೆ ರಾಜ್ಯಗಳಿಗೆ ಹೋಗಿದೆ. ಆದರೆ ಸ್ವಲ್ಪ ಪ್ರಮಾಣ ಗಿರಣಿಗಳಲ್ಲಿ ಮತ್ತು ಇನ್ನು ಸ್ವಲ್ಪ ರೈತರ ಬಳಿ ಲಭ್ಯವಿದೆ. ಸರಕಾರವು

ಒಳ್ಳೆಯ ಬೆಲೆ ಕೊಡುವುದಾಗಿ ಭರವಸೆ ಕೊಟ್ಟರೆ ರೈತರು ಮುಂದೆ ಬರುತ್ತಾರೆ. ನೇರವಾಗಿ ಗಿರಣಿಗಳಿಗೆ ಪೂರೈಸಲಿ, ಅಲ್ಲಿಂದಲೇ ಸಂಸ್ಕರಿಸಿ ಅಕ್ಕಿಯನ್ನು ಸರಕಾರಕ್ಕೆ ಸರಬರಾಜು ಮಾಡಬಹುದು. ಈ ಪ್ರಕ್ರಿಯೆಯಿಂದ ಸುಮಾರು 300-350 ಗಿರಣಿಗಳ ಜತೆಗೆ ನೂರಾರು ಕಾರ್ಮಿಕರಿಗೆ ಕೆಲಸವೂ ದೊರೆಯುತ್ತದೆ’ ಎಂದು ಪ್ರಸನ್ನ ಹೇಳಿದ್ದಾರೆ.

ರೈತರಿಗೂ ಅನುಕೂಲ

“ರಾಜ್ಯದಲ್ಲಿ ಮುಖ್ಯವಾಗಿ ರಾಯಚೂರು, ಬಳ್ಳಾರಿ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರ ದುರ್ಗ, ಶಿವಮೊಗ್ಗ, ಹಾಸನ, ಸ್ವಲ್ಪ ಭಾಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ.

ಅಕ್ಕಿ ಸ್ವಾವಲಂಬನೆ ಸಾಧ್ಯ

ವಾರ್ಷಿಕ  ಸುಮಾರು 30 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ಉತ್ಪಾದನೆಯಾಗುತ್ತದೆ. ಇದರಲ್ಲಿ ಸೋನಾಮಸೂರಿ ಸಹಿತ ಉತ್ಕೃಷ್ಟ ಗುಣಮಟ್ಟದ ಅಕ್ಕಿಯ ಪ್ರಮಾಣ ಹೆಚ್ಚಿದೆ. ಅದನ್ನು ಹೊರತುಪಡಿಸಿಯೂ ದಪ್ಪ ಅಕ್ಕಿಯನ್ನು ರಾಜ್ಯದಿಂದಲೇ ಪೂರೈಸಲು ಸಾಧ್ಯವಿದೆ. ಇಲ್ಲಿಂದಲೇ ಖರೀದಿಸುವುದರಿಂದ ರೈತರಿಗೂ ಅನು ಕೂಲ ಆಗುವುದರ ಜತೆಗೆ ಕಾರ್ಮಿಕರಿಗೂ ಕೆಲಸ ಸಿಗುತ್ತದೆ. ಇದಕ್ಕಾಗಿ ಸರಕಾರ ಛತ್ತೀಸ್‌ಗಡ, ತೆಲಂಗಾಣಗಳತ್ತ ಮುಖ ಮಾಡುವ ಅಗತ್ಯ ಇಲ್ಲ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

“ಅಷ್ಟಕ್ಕೂ 10 ಕೆ.ಜಿ. ಅಕ್ಕಿಯನ್ನೇ ನೀಡಬೇಕೆಂದಿಲ್ಲ; ಆಯಾ ಪ್ರದೇಶಕ್ಕೆ ಅನು ಗುಣವಾಗಿ ಜೋಳ ಹಾಗೂ ರಾಗಿಯನ್ನೂ ಸೇರಿಸಿ 10 ಕೆ.ಜಿ. ಭರ್ತಿ ಮಾಡ ಬಹುದು. ರಾಜ್ಯದಲ್ಲಿ ನೂರಾರು ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ) ಗಳಿದ್ದು, ಅಲ್ಲಿ ಸಾವಿರಾರು ರೈತ ಸದಸ್ಯರಾಗಿದ್ದಾರೆ. ಅವುಗಳಿಗೆ ಈ ಆಹಾರ ಧಾನ್ಯಗಳ ಸಂಸ್ಕರಣೆ ಮತ್ತು ಪೂರೈಕೆ ಹೊಣೆಯನ್ನು ಸರಕಾರ ನೀಡಬೇಕು. ಅದರಿಂದ ಅವರಿಗೂ ಪ್ರೋತ್ಸಾಹ ಲಭಿಸಿದಂತಾಗುತ್ತದೆ’ ಎಂದೂ ಅವರು  ಹೇಳಿದರು.

ಆಹಾರ ನಿಗಮದ ಪತ್ರ ಬಹಿರಂಗಪಡಿಸಿದ ಸಿಎಂ

ಬೆಂಗಳೂರು: ಭಾರತೀಯ ಆಹಾರ ನಿಗಮ (ಎಫ್ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ವಾಗ್ಧಾನ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹಾಕಿದ್ದ ಸವಾಲಿಗೆ ಟ್ವಿಟರ್‌ನಲ್ಲಿ ಎಫ್ಸಿಐ ಪತ್ರ ಹಾಕುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. “ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪ ಪ್ರಚಾರದ ಗೀಳಿನಿಂದಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿರುವುದು. ಸಿ.ಟಿ. ರವಿ ಮತ್ತಿತರ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ವಿನಾ ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ’ ಎಂದು ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ.

ಸೋನಾ ಮಸೂರಿಯೇ ಸಿಗುತ್ತಿತ್ತು!

“ರಾಯಚೂರು, ಬಳ್ಳಾರಿ, ಕೊಪ್ಪಳ ಕಡೆ ಸೋನಾ ಮಸೂರಿ ಬೆಳೆಯುತ್ತಾರೆ. ಅದರ ಬೆಲೆ ಈಗ ಕ್ವಿಂಟಾಲ್‌ಗೆ 4,500 ರೂ. ಇದೆ. ಸರಕಾರ ಋತುವಿನ ಆರಂಭದಲ್ಲೇ ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ ಕ್ವಿಂಟಾಲ್‌ಗೆ 3,500 ರೂ.ಗಳಲ್ಲಿ ಅದೇ ಸಿಗುತ್ತಿತ್ತು. ಆದರೆ ಈಗ ಅಷ್ಟು ಅಕ್ಕಿ ಸರಕಾರ ಹೇಳುವ ದರದಲ್ಲಿ ಸಿಗುವುದು ಕಷ್ಟ’ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿಗಳ ಮಾಲಕರ ಸಂಘದ ಗೌರವಾಧ್ಯಕ್ಷ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. “ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಯಾವ ಗುಣಮಟ್ಟ ಮತ್ತು ಎಷ್ಟು ದರದಲ್ಲಿ ಲಭ್ಯವಾಗಲಿದೆ ಎನ್ನುವುದು ಪ್ರಶ್ನೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಅಕ್ಕಿ ಉತ್ಕೃಷ್ಟ ಗುಣಮಟ್ಟದ್ದು, ರಫ್ತು ಕೂಡ ಆಗುತ್ತದೆ. ದಪ್ಪ ಅಕ್ಕಿ ಬೆಳೆದರೂ ಅದಕ್ಕೆ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಇದೆ. ಅಲ್ಲದೆ ಇದು ಕೇವಲ ಒಂದು ತಿಂಗಳ ಪ್ರಶ್ನೆ ಅಲ್ಲ, ಪ್ರತೀ ತಿಂಗಳು ಬೇಕಾಗುತ್ತದೆ’ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next