Advertisement
ಪಡ್ಡುರಾತ್ರಿ ಮಾಡಿದ ಬೆಳ್ತಿಗೆ ಅನ್ನ ಉಳಿದರೆ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಹೊಸ ರುಚಿಯ ಪಡ್ಡುವನ್ನು ಮಾಡಿ ಬಡಿಸಬಹುದು. ಇದಕ್ಕೆ ಮನೆಯಲ್ಲಿರುವ ತರಕಾರಿ ಸಾಮಗ್ರಿಗಳು ಸಾಕು. ಹಾಗಾಗಿ ಥಟ್ಟಂತ ಮಾಡಬಹುದು. ಅನ್ನವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿ ತೆಗೆದಿಟ್ಟುಕೊಳ್ಳಿ. ಅನಂತರ ಮಿಕ್ಸಿ ಜಾರಿಗೆ ತುಂಡು ಮಾಡಿದ ಕೊಬ್ಬರಿ, 4 ಒಣ ಮೆಣಸು, ಈರುಳ್ಳಿ, ಹಸಿಮೆಣಸು, ಬೇವಿನ ಸೊಪ್ಪು ಹಾಕಿ ಸ್ವಲ್ಪ ತಿರುಗಿಸಿ ತೆಗೆದು ಪಾತ್ರೆಗೆ ಹಾಕಿಕೊಳ್ಳಿ, ಅದಕ್ಕೆ ಒಂದು ಚಮಚ ಅರಸಿನ, ಒಂದು ಕಪ್ ಚಿರೋಟಿ ರವಾ, ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ, ಅನಂತರ ನೀರು ಹಾಕಿಕೊಂಡು ಪಡ್ಡು ಮಾಡಲು ಬೇಕಾದಷ್ಟು ಮಂದ ಇರಿಸಿಕೊಂಡು ಪಡ್ಡು (ಅಪ್ಪ) ಕಾವಲಿ ಹಾಕಿ ಚೆನ್ನಾಗಿ ಬೇಯಿಸಿ. ಬಿಸಿ ಬಿಸಿ ಇರುವಾಗಲೇ ತಿನ್ನಲು ಬಡಿಸಿ. ಇದಕ್ಕೆ ಪ್ರತ್ಯೇಕ ಚಟ್ನಿ, ಸಾಂಬಾರಿನ ಆವಶ್ಯಕತೆ ಇರುವುದಿಲ್ಲ.
ಜಾಸ್ತಿ ಉಳಿದ ಬೆಳ್ತಿಗೆ ಅನ್ನವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ಅನಂತರ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿರೋಟಿ ರವಾ, ಹಾಕಿ ಗಟ್ಟಿ ಹಿಟ್ಟನ್ನು ಕಲಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ, ಒಣ ಮೆಣಸು, ಸಾಸಿವೆ, ಜೀರಿಗೆ ಹೆಸರು ಬೇಳೆ ಹಾಕಿ ಒಗ್ಗರಣೆ ಮಾಡಿ ಅದನ್ನು ಈ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಪುಂಡಿ ಗಟ್ಟಿಯ ಆಕಾ ರಕ್ಕೆ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಒಂದು ಸೆಕೆ ಬೇಯಿಸಿ. ಅನಂತರ ಬಿಸಿ ಬಿಸಿ ಇರುವಾಗಲೇ ಸವಿಯಿರಿ. ದೋಸೆ
ದೋಸೆ ಮಾಡಲು ಉಳಿದ ಬೆಳ್ತಿಗೆ ಅಥವಾ ಕುಚ್ಚಿಲು ಅನ್ನ, ರವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಕೊಳ್ಳಿ ಅನಂತರ ಅದಕ್ಕೆ ನೀರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಕರಿ ಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ದೋಸೆ ಕಾವಲಿಗೆ ಎರೆಯಿರಿ. ಅದು ಸುಳಿಯಲು ಬಾರದಿದ್ದರೆ ನೀರು ದೋಸೆಯ ರೀತಿಯಲ್ಲಿ ಎರೆಯಿರಿ, ಆದರೆ ಅಧಿಕ ನೀರು ಸೇರಿಸುವುದು ಬೇಡ. ಬೆಳ್ತಿಗೆ ಅನ್ನದ ದೋಸೆ ಹಾಗೂ ಕುಚ್ಚಿಲು ಅನ್ನದ ದೋಸೆ ವಿಭಿನ್ನ ರುಚಿಯನ್ನು ನೀಡುತ್ತದೆ. ಇದಕ್ಕೆ ತುಪ್ಪವನ್ನು ಸೇರಿಸಿ, ಚಟ್ನಿ ಮಾಡಿಕೊಂಡು ಸವಿಯಿರಿ.
Related Articles
ಉಳಿದ ಅನ್ನದಿಂದ ತಯಾರಿಸಬಹುದಾದ ಚಿತ್ರಾನ್ನ, ಮೊಸರಾನ್ನ, ಲೆಮೆನ್ ರೈಸ್, ಟೊಮೇಟೊ ಬಾತ್ ಹೀಗೆ ಹಲವು ವಿಧಗಳನ್ನು ಮಾಡಬಹುದು. ಅನ್ನ ಒಂದೇ ಆದರೂ ರುಚಿ ಬೇರೆ ಬೇರೆ ವೆರೈಟಿ ಬ್ರೇಕ್ ಫಾಸ್ಟ್ ಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದರ ರುಚಿಯನ್ನು ಇಷ್ಟ ಪಡುವುದಂತು ಸತ್ಯ. ಹೀಗೆ ನಾನಾ ರೀತಿಯಲ್ಲಿ ಉಳಿದ ಅನ್ನವನ್ನು ಬಳಸಿ ಹೊಸ ಪ್ರಯೋಗವನ್ನು ಮಾಡಬಹುದು. ಹಾಗೆಯೇ ಇನ್ನೊಬ್ಬರಿಗೆ ತಿಳಿಸಿದರೆ ಅವರೂ ತಿಂದು ಆಸ್ವಾದಿಸುತ್ತಾರೆ.
Advertisement
ಭರತ್ ರಾಜ್ ಕರ್ತಡ್ಕ