Advertisement

ಜರ್ಮನಿಯ ರೈನ್‌-ಮೈನ್‌ ಕನ್ನಡ ಸಂಘ:ಕನ್ನಡ ಕಂಪು, ಕನ್ನಡ ಡಿಂಡಿಮದ ಸಾಂಸ್ಕೃತಿಕ ಹಬ್ಬ

03:32 PM Nov 30, 2024 | Team Udayavani |

ಫ್ರಾಂಕ್‌ಫ‌ರ್ಟ್‌ನ ರೈನ್‌-ಮೈನ್‌ ಕನ್ನಡ ಸಂಘದ ವತಿಯಿಂದ ನ.16, ರಂದು ಕರ್ನಾಟಕ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಜರ್ಮನಿಯಲ್ಲಿರುವ ಕನ್ನಡಿಗರು ತಮ್ಮ ತಾಯ್ನುಡಿ ಮತ್ತು ಸಾಂಸ್ಕೃತಿಕ ಪಾರಂಪರ್ಯದ ಸ್ಮರಣಾರ್ಥ ಒಂದುಗೂಡಿ ಈ ಕನ್ನಡ ಹಬ್ಬವನ್ನು ಸಡಗರದಿಂದ ಆಚರಿಸಿದರು.

Advertisement

ಸಮಾರಂಭವನ್ನು ಸಂಘದ ಅಧ್ಯಕ್ಷರಾದ ವೇದ ಕುಮಾರಸ್ವಾಮಿ ಮತ್ತು ಉಪಾಧ್ಯಕ್ಷರಾದ ರಿಯಾಜ್‌ ಶಿರಸಂಗಿರವರು ಉದ್ಘಾಟಿಸಿದರು. ಅವರು ತಮ್ಮ ಭಾಷಣದ ಮೂಲಕ ಕನ್ನಡ ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ಹಾಗೂ ಭಾರತೀಯ ಪರಂಪರೆಯ ಆಳವನ್ನು ಪ್ರಭಾವಶೀಲವಾಗಿ ವಿವರಿಸಿದರು. ರೈನ್‌-ಮೈನ್‌ ಕನ್ನಡ ಸಂಘದ ಸಮಿತಿಯ ಎಲ್ಲ ಸದಸ್ಯರೂ ಉತ್ಸಾಹಭರಿತರಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆ ಮತ್ತು ಮಾರ್ಗದರ್ಶನವನ್ನು ಶ್ರವಂತಿ ಜಯಚಂದ್ರನ್‌ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮಕ್ಕಳ ಪ್ರತಿಭೆ, ಸಾಂಸ್ಕೃತಿಕ ಪ್ರದರ್ಶನ
ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ಉತ್ತಮ ವೇದಿಕೆ ಒದಗಿಸಿತು. ಮಕ್ಕಳಿಂದ ವಿವಿಧ ಆಕರ್ಷಕ ನೃತ್ಯ ಪ್ರದರ್ಶನಗಳು ಮಕ್ಕಳ ಕಲಾತ್ಮಕತೆಯನ್ನು ಹೊರಹೊಮ್ಮುವಂತೆ ಮಾಡಿತು. ಹಬ್ಬಗಳ ವೈವಿಧ್ಯವನ್ನು ಪ್ರತಿನಿಧಿಸುವ ಫ್ಯಾಶನ್‌ ಪ್ರದರ್ಶನದಲ್ಲಿ ಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಪರಿಕರಗಳನ್ನು ಧರಿಸಲು ಅವಕಾಶ ದೊರಕಿತು.

ಇದು ಕರ್ನಾಟಕದ ಪರಂಪರೆಯನ್ನು ಹಂಚಿಕೊಳ್ಳಲು ಒಳ್ಳೆಯ ಅವಕಾಶವಾಗಿತ್ತು. ಮಕ್ಕಳು ಪುನೀತ್‌ ರಾಜಕುಮಾರ್‌ ಅವರ ಹಾಡುಗಳಿಗೆ ನೃತ್ಯ ಮಾಡುವ ಮೂಲಕ, ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಕನ್ನಡ ಭಾಷೆಯ ಮೂಲಗಳಿಂದ ಪ್ರೇರಿತವಾದ ನೃತ್ಯದ ಮೂಲಕ ಸಾಂಸ್ಕೃತಿಕ ಗುರುತಿನ ಮಹತ್ವವನ್ನು ಮಕ್ಕಳು ಸಂತೋಷದಿಂದ ಸಂಭ್ರಮಿಸಿದರು.

Advertisement

ಸಂಘದ ಸದಸ್ಯರು ಕನ್ನಡ ಗೀತೆಗಳಿಗೆ ನೃತ್ಯಗಳ ಮೂಲಕ ಮನರಂಜನೆಯನ್ನು ನೀಡಿದರು. ಈ ನೃತ್ಯಗಳು ಕರ್ನಾಟಕದ ವೈವಿಧ್ಯವನ್ನು ಮತ್ತು ಪರಂಪರೆಯನ್ನು ಪ್ರತಿನಿಧಿಸಿತು. ಆರ್‌ಎಂಕೆಎಸ್‌ ಸದಸ್ಯರ ನೃತ್ಯ ಮತ್ತು ಗಾಯನ ಪ್ರದರ್ಶನಗಳು ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಸುಂದರವಾಗಿ ಪ್ರದರ್ಶನದ ಮೂಲಕ ವ್ಯಕ್ತಪಡಿಸಿದರು.

ಸ್ಥಳೀಯ ಕರ್ನಾಟಕ ಶೈಲಿ ನೃತ್ಯ, ಬೃಂದಾವನದಲ್ಲಿ ಗೋಪಿಕೆಯರು, ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ ಸೇರಿದಂತೆ ವಿವಿಧ ವಿಷಯಗಳನ್ನೊಳಗೊಂಡ ನೃತ್ಯ ಪ್ರದರ್ಶನಗಳು ಎಲ್ಲರ ಕಣ್ಮನಗಳನ್ನು ಸೆಳೆಯಿತು. ಚಿಣ್ಣರ ಮೇಳದ ಪುಟಾಣಿಗಳು ಕರ್ನಾಟಕದ ಹಬ್ಬಗಳನ್ನು ಬಣ್ಣ ಬಣ್ಣದ ಉಡುಗೆ ತೊಡುಗೆಗಳ ಮೂಲಕ ಸಂಭ್ರಮಿಸಿದರು. ರಾಜ್ಯೋತ್ಸವದ ಹಬ್ಬದೊಂದಿಗೆ ದೀಪಾವಳಿ, ಗಣೇಶ, ಹಲವಾರು ಹಬ್ಬಗಳು ಮಕ್ಕಳು ವೇದಿಕೆಯ ಮೇಲೆ ತಂದದ್ದು ನೋಡುಗರ ಕಣYಳಿಗೆ ಓಕುಳಿಯಂತಾಯಿತು.

ಸಂಗೀತದ ವೈಭವ ಮತ್ತು ನಿರೂಪಣೆ
ಕರ್ನಾಟಕದ ಪ್ರಸಿದ್ಧ ಪಿಟೀಲು ಕಲಾವಿದರಾದ ವಿದ್ವಾನ್‌ ಸುಮಂತ್‌ ಮಂಜುನಾಥ್‌ ಮತ್ತು ಮೃದಂಗ ಕಲಾವಿದರಾದ ರಾಜೇಶ್‌ ಚಂಗನಾಥ್‌ ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಇವರಿಬ್ಬರ ಕಲ್ಪನೆಯಿಂದ ಉಂಟಾದ ಸಂಗೀತವು, ಕಲೆ ಮತ್ತು ಪರಂಪರೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತಿತ್ತು. ಸಂಗೀತದ ನಾದಕ್ಕೆ ವೀಕ್ಷಕರು ತಲದೂಗಿದರು. ಈ ಕಾರ್ಯಕ್ರಮವನ್ನು ಪ್ರಸಿದ್ಧ ಕನ್ನಡ ನಿರೂಪಕಿ ಅನುಷಾ ಲಕ್ಕಣ್ಣ ಅವರು ತಮ್ಮ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು.

ಸಮಾರೋಪ
ಆರ್‌ಎಂಕೆಎಸ್‌ ವತಿಯಿಂದ ಕರ್ನಾಟಕ ಶೈಲಿಯ ರುಚಿಕರ ಆಹಾರ ಮತ್ತು ಸಂಜೆಯ ಚಾಟ್ಸ್‌ ಪ್ರೇಕ್ಷಕರಿಗೆ ನೀಡಲಾಯಿತು. ಇದು ಸಮಾರಂಭಕ್ಕೆ ವಿಶೇಷ ರುಚಿಯನ್ನು ಸೇರಿಸಿತು. ಈ ಕಾರ್ಯಕ್ರಮವು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿ ಪರಿಣಮಿಸಿತೆಂದು ಸಮಿತಿಯ ಸದಸ್ಯರಾದ ಅಕ್ಷಯ್‌ ಕಬಾಡಿ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಸಂತಸ ವ್ಯಕ್ತಪಡಿಸಿದರು.

ರೈನ್‌-ಮೈನ್‌ ಕನ್ನಡ ಸಂಘದ ಕರ್ನಾಟಕ ರಾಜ್ಯೋತ್ಸವವು ಜರ್ಮನಿಯಲ್ಲಿದ್ದರೂ, ಕನ್ನಡಿಗರ ಹೃದಯದಲ್ಲಿ ಕರ್ನಾಟಕವನ್ನು ಪುನಃ ಜೀವಂತವಾಗಿ ಮೂಡುವಂತೆ ಶ್ರಮಿಸಿದ ಸಂಘದ ಸಮಾರಂಭದ ಪ್ರಚಾರಣೆ ನಿರ್ವಾಹಕಿಯಾದ ಪೂಜಾ ಚಿರಂತ್‌ ರವರಿಗೆ ಅಭಿನಂದನೆಗಳು. ಈ ರೀತಿಯ ಕಾರ್ಯಕ್ರಮಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ.

*ಸುಷ್ಮಾ ಪ್ರಸಾದ್‌ ನಿಶಾಂತ್‌, ಜರ್ಮನಿ

Advertisement

Udayavani is now on Telegram. Click here to join our channel and stay updated with the latest news.

Next