ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಾಗೂ ಡ್ರಗ್ಸ್ ಪ್ರಕರಣದ ವಿಚಾರದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಗೆ ಮುಂಬೈ ವಿಶೇಷ ಕೋರ್ಟ್ ಬುಧವಾರ(ಡಿಸೆಂಬರ್ 02, 2020) ಜಾಮೀನು ನೀಡಿದೆ.
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಿಯಾ ಚಕ್ರವರ್ತಿ ಕೂಡಾ ಬಂಧನಕ್ಕೊಳಗಾಗಿದ್ದು, ಈಕೆಯ ಜಾಮೀನು ಅರ್ಜಿ ವಜಾಗೊಂಡಿತ್ತು. ಬಳಿಕ ಅಕ್ಟೋಬರ್ ನಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ತನಗೆ ಜಾಮೀನು ನೀಡಬೇಕೆಂದು ಕೋರಿ ಶೋವಿಕ್ ಚಕ್ರವರ್ತಿ ನವೆಂಬರ್ ತಿಂಗಳಿನಲ್ಲಿಯೇ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದ. ಎನ್ ಸಿಬಿಯಿಂದ ಬಂಧನಕ್ಕೊಳಗಾದ ನಂತರ ಜಾಮೀನಿಗಾಗಿ ಶೋವಿಕ್ ಮೂರು ಬಾರಿ ವಿಶೇಷ ಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆದರೆ ಮೂರು ಬಾರಿಯೂ ಜಾಮೀನು ಅರ್ಜಿ ಉಭಯ ಕೋರ್ಟ್ ಗಳಲ್ಲಿಯೂ ತಿರಸ್ಕೃತಗೊಂಡಿತ್ತು.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಕುರಿತಂತೆ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸಿದ ನಂತರ ಎನ್ ಸಿಬಿ ತನಿಖೆ ನಡೆಸಲು ಆರಂಭಿಸಿತ್ತು.
ಇದನ್ನೂ ಓದಿ:ನಿಗದಿಗಿಂತ 1 ಗಂಟೆ ತಡವಾಗಿ ಬಂದ ರೈಲು : ಹಳಿ ಮೇಲೆ ಕುಳಿತು ಪ್ರಯಾಣಿಕರ ಪ್ರತಿಭಟನೆ
ಸುಶಾಂತ್ ಪ್ರಕರಣದಲ್ಲಿ ಡ್ರಗ್ಸ್ ಜಾಲದ ಕೈವಾಡ ಇದೆ ಆರೋಪದ ಬಳಿಕ ರಿಯಾ ಚಕ್ರವರ್ತಿ ಮೊಬೈಲ್ ಫೋನ್ ನಲ್ಲಿನ ಸಾಮಾಜಿಕ ಜಾಲತಾಣಗಳ ಚಾಟ್ಸ್ ಗಳನ್ನು ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಿತ್ತು.