ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಜಾಲದ ನಂಟಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ನಟಿ ರಿಯಾ ಚಕ್ರವರ್ತಿಗೆ ಬರೋಬ್ಬರಿ ಒಂದು ತಿಂಗಳ ನಂತರ ಬಾಂಬೆ ಹೈಕೋರ್ಟ್ ಬುಧವಾರ(ಅಕ್ಟೋಬರ್ 07, 2020) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನಟ ಸುಶಾಂತ್ ಸಿಂಗ್ ಸಾವು ಹಾಗೂ ಡ್ರಗ್ಸ್ ಜಾಲದ ನಂಟಿನ ಆರೋಪದಲ್ಲಿ ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿದ್ದರು. ಏತನ್ಮಧ್ಯೆ ಜಾಮೀನು ಕೋರಿ ಇಬ್ಬರೂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್ ಶೋವಿಕ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ರಿಯಾ ಚಕ್ರವರ್ತಿಗೆ ಒಂದು ಲಕ್ಷ ರೂಪಾಯಿ ಶ್ಯೂರಿಟಿ ಭದ್ರತೆ ಆಧಾರದ ಮೇಲೆ ಹೈಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ 8ರಂದು ಎನ್ ಸಿಬಿ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದರು.
ಇದನ್ನೂ ಓದಿ:ಹತ್ರಾಸ್ ಘಟನೆ ಭಯಾನಕ : ಸಾಕ್ಷ್ಯ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ: ಸುಪ್ರೀಂ ಪ್ರಶ್ನೆ
ಎನ್ ಸಿಬಿ ಸ್ಪೆಷಲ್ ಕೋರ್ಟ್ ಮಂಗಳವಾರ(ಅ.6, 2020) ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿ ಆದೇಶ ನೀಡಿತ್ತು. ಜೂನ್ 14ರಂದು ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ನಟ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಸುಶಾಂತ್ ಸಾವಿನ ಹಿಂದೆ ಡ್ರಗ್ಸ್ ಜಾಲದ ನಂಟಿನ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಸಿಂಡಿಕೇಟ್ ನಲ್ಲಿ ರಿಯಾ ಸಕ್ರಿಯ ಸದಸ್ಯಳಾಗಿರುವುದಾಗಿ ಆರೋಪಿಸಲಾಗಿತ್ತು.
ಸುಶಾಂತ್ ಸಿಂಗ್ ಗೆ ಬೈಪೋಲಾರ್ ಕಾಯಿಲೆ ಇದ್ದಿತ್ತು. ಆತನಿಗೆ ಮಾನಸಿಕ ಖಿನ್ನತೆಯ ಕಾಯಿಲೆ ವಿಪರೀತಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯವರು ದೂರ ಇಟ್ಟುಬಿಟ್ಟಿದ್ದರು. ಲಾಕ್ ಡೌನ್ ಸಮಯದಲ್ಲಿ ಸುಶಾಂತ್ ಮಾನಸಿಕ ಆರೋಗ್ಯ ತೀವ್ರ ಹದಗೆಟ್ಟಿರುವುದಾಗಿ ರಿಯಾ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದು, ಖ್ಯಾತ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಸಾವು ಕೂಡಾ ಸುಶಾಂತ್ ಮೇಲೆ ಅಗಾಧವಾಗಿ ಪರಿಣಾಮಬೀರಿತ್ತು ಎಂದು ರಿಯಾ ತಿಳಿಸಿದ್ದಾಳೆ.