ಹೊಸದಿಲ್ಲಿ: ಭಾರತೀಯ ಇತಿಹಾಸವನ್ನು ಪುನಃ ಬರೆಯಿರಿ, ನಿಮ್ಮ ಪ್ರಯತ್ನಗಳಿಗೆ ಸರ್ಕಾರವು ಬೆಂಬಲ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತಿಹಾಸಕಾರರಿಗೆ ಭರವಸೆ ನೀಡಿದ್ದಾರೆ.
“ನಾನು ಇತಿಹಾಸದ ವಿದ್ಯಾರ್ಥಿ. ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ ಮತ್ತು ತಿರುಚಲಾಗಿದೆ ಎಂಬ ಮಾತುಗಳನ್ನು ನಾನು ಬಹಳಷ್ಟು ಬಾರಿ ಕೇಳಿದ್ದೇನೆ. ಈಗ ನಾವು ಇದನ್ನು ಸರಿಪಡಿಸಬೇಕಾಗಿದೆ” ಎಂದು ಅಸ್ಸಾಂ ಸರ್ಕಾರದ ಸಮಾರಂಭದಲ್ಲಿ ಅಮಿತ್ ಶಾ ಹೇಳಿದರು.
“ಇತಿಹಾಸವನ್ನು ಸರಿಯಾಗಿ ಮತ್ತು ವೈಭವಯುತವಾಗಿ ಪ್ರಸ್ತುತಪಡಿಸುವುದನ್ನು ಯಾರು ತಡೆಯುತ್ತಿದ್ದಾರೆಂದು ನಾನು ನಿಮ್ಮನ್ನು ಕೇಳುತ್ತೇನೆ” ಎಂದು 17 ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400 ನೇ ಜನ್ಮದಿನದ ಮೂರು ದಿನಗಳ ಆಚರಣೆಯ ಎರಡನೇ ದಿನದಂದು ಶಾ ಹೇಳಿದರು.
“ಇಲ್ಲಿ ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಒಂದು ವಿನಂತಿ. ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿ” ಎಂದರು.
ಇದನ್ನೂ ಓದಿ:ಗುಡಿಬಂಡೆ: ಪಂಚರತ್ನ ಯಾತ್ರೆ; ಕಾರ್ಯಕರ್ತನಿಂದ ಪತ್ರಕರ್ತನ ಮೇಲೆ ಹಲ್ಲೆ, ಬೆದರಿಕೆ
ಮುಂದೆ ಬಂದು ಸಂಶೋಧನೆ ಮಾಡಿ, ಇತಿಹಾಸವನ್ನು ಪುನಃ ಬರೆಯಿರಿ. ಹೀಗೆ ನಾವು ಮುಂದಿನ ಪೀಳಿಗೆಗೆ ಸ್ಪೂರ್ತಿ ತುಂಬಬಹುದು ಎಂದು ಅಮಿತ್ ಶಾ ಹೇಳಿದರು.