Advertisement

ಮೌಲ್ಯಮಾಪಕರಿಗೆ ಸಂಭಾವನೆ ನೀಡಿ

01:25 AM Jun 26, 2019 | Lakshmi GovindaRaj |

ಬೆಂಗಳೂರು: ಮೌಲ್ಯಮಾಪಕರಿಗೆ ಕೂಡಲೇ ಸಂಭಾವನೆ ಬಿಡುಗಡೆ ಮಾಡಬೇಕು ಹಾಗೂ 2008ರ ನಂತರ ನೇಮಕಗೊಂಡ ಉಪನ್ಯಾಸಕರಿಗೆ 500 ರೂ. ಎಕ್ಸ್‌ಗೆಷಿಯಾವನ್ನು ಮೂಲ ವೇತನದಲ್ಲೇ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, 2018-19ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಭಾವನೆ ಇನ್ನು ಬಿಡುಗಡೆ ಮಾಡಿಲ್ಲ. ಕಳೆದ ವರ್ಷವೂ ಇದೇ ಸಮಸ್ಯೆ ಉದ್ಭವಿಸಿತ್ತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವವರಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚೆಕ್‌ ಮೂಲಕ ಗೌರವ ಸಂಭಾವನೆ ವಿತರಿಸುವ ಮಾದರಿಯಲ್ಲೇ ಪಿಯು ಇಲಾಖೆ ನಮಗೂ ಗೌರವ ಸಂಭಾವನೆಯನ್ನು ಚೆಕ್‌ ಮೂಲಕ ವಿತರಿಸಬೇಕು ಎಂದು ಆಗ್ರಹಿಸಿದರು.

2018 ಆಗಸ್ಟ್‌ 1ರ ನಂತರ ಅಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ 500 ರೂ. ಎಕ್ಸ್‌ಗೆÅಷಿಯಾವನ್ನು ಮೂಲ ವೇತನಕ್ಕೆ ವಿಲೀನಗೊಳಿಸಬೇಕು. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು 6ನೇ ವೇತನ ಆಯೋಗದ 2ನೇ ವರದಿಯಲ್ಲಿ ಸೂಚಿಸಿರುವಂತೆ ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಪಿಯು ಕಾಲೇಜಿನ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆಯನ್ನು ಬಗೆಹರಿಸಬೇಕು. ಎನ್‌ಸಿಇಆರ್‌ಟಿ ನಿಯಮದಂತೆ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 80ರಿಂದ 40ಕ್ಕೆ ನಿಗದಿ ಪಡಿಸಬೇಕು. ನೆಟ್‌, ಸ್ಲೆಟ್‌ ಪೂರೈಸಿದ ಪಿಯು ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡಬೇಕು. ಕರ್ನಾಟಕ ಪಬ್ಲಿಕ್‌ ಶಾಲೆಯ ಆಡಳಿತಾತ್ಮಕ ಹಾಗೂ ಪ್ರಾಯೋಗಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಎಂಎಚ್‌ಆರ್‌ಡಿ ಸೂಚನೆಯಂತೆ ರಾಜ್ಯದಲ್ಲಿ ಗಣಿತ ವಿಷಯಕ್ಕೆ 20 ಪ್ರಾಯೋಗಿಕ ಅಂಕ ನೀಡಬೇಕು ಎಂದು ಆಗ್ರಹಿಸಿದ್ದರು.

ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಪಿಯು ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆದಷ್ಟು ಬೇಗ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಹಾಗೆಯೇ ಇಲಾಖೆಯೆ ಕಾಯಂ ನಿರ್ದೇಶಕರನ್ನು ನೇಮಿಸಿ, ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು. ವೃತ್ತಿ ಶಿಕ್ಷಣ ಇಲಾಖೆಯಿಂದ ವೀಲಿನಗೊಂಡಿರುವ ಉಪನ್ಯಾಸಕರಿಗೆ ಬಿ.ಇಡಿ ಪದವಿಯಿಂದ ವಿನಾಯ್ತಿ ನೀಡಿ ಅವರ ಖಾಯಂ ಪೂರ್ವ ಸೇವಾವಧಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

2013ರಲ್ಲಿ ನೇಮಕಗೊಂಡ ಉಪನ್ಯಾಸಕರಿಗೆ ವೇತನರಹಿತ ಬಿ.ಇಡಿ ಘೋಷಣೆ ಮಾಡಿರುವುದನ್ನು ಹಿಂದಕ್ಕೆ ಪಡೆಯಬೇಕು. 600 ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಬೇಕು. ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಪ್ರತಿ ತಿಂಗಳ ಒಂದನೇ ತಾರೀಕಿನಿಂದಲೇ ವೇತನ ನೀಡಬೇಕು.

ಅನುದಾನಿತ ಕಾಲೇಜುಗಳಿಗೆ ಅನುದಾನ ರಹಿತ ಕಾಲೇಜಿನ ಉಪನ್ಯಾಸಕರನ್ನು ಪ್ರಾಂಶುಪಾಲರನ್ನಾಗಿ ನೇಮಿಸುವ ಬದಲಿಗೆ, ಅನುದಾನಿತ ಉಪನ್ಯಾಸಕರನ್ನೇ ನೇಮಿಸಬೇಕು. ಉಪನ್ಯಾಸಕರ ಈ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದೆ ಉಗ್ರವಾದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಸಂಘದ ಕಾರ್ಯಾಧ್ಯಕ್ಷ ಎಸ್‌.ಆರ್‌.ವೇಂಕಟೇಶ್‌, ಪ್ರಧಾನ ಕಾರ್ಯದರ್ಶಿ ಎ.ಎಚ್‌.ನಿಂಗೇಗೌಡ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next