ಬೆಂಗಳೂರು: ಸಚಿವ ಅಶೋಕ್ ರಾತ್ರಿ ಕರ್ಪ್ಯೂ ವಿಧಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ತಜ್ಞರ ಸಮಿತಿಯೂ ಅದನ್ನೇ ಹೇಳಿತ್ತು. ಆದರೆ ನಮ್ಮ ವಿರೋಧ ಪಕ್ಷದ ಮುಖಂಡರು ವಿರೋಧ ಮಾಡಿದ್ದರು. ಹೀಗಾಗಿ ಮುಖ್ಯಮಂತ್ರಿಗಳು ರಾತ್ರಿ ಕರ್ಫ್ಯೂ ಹಿಂಪಡೆಯುವ ತೀರ್ಮಾನ ಮಾಡಿದರು. ಈ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಮುಗಿದ ಅಧ್ಯಾಯ ಎಂದು ಹೇಳಿದ್ದೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕರ್ಪ್ಯೂ ವಿಧಿಸುವ ಬಗ್ಗೆ ಯಾವುದೇ ಗೊಂದಲವಿಲ್ಲ. ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಈ ಬಗ್ಗೆ ನಮ್ಮ ಗೃಹ ಸಚಿವರು, ಮಂತ್ರಿಗಳು, ಅಧಿಕಾರಿಗಳು ತೀರ್ಮಾನ ಮಾಡ್ತಾರೆ. ಈ ಬಗ್ಗೆ ನಮ್ಮ ಸಲಹೆಯನ್ನು ಹಿಂದೆಯೇ ನೀಡಿದ್ದೆ ಎಂದರು.
ಯುಕೆ ಯಿಂದ ಬಂದವರಲ್ಲಿ 34 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದರಲ್ಲಿ 7 ಮಂದಿಗೆ ರೂಪಾಂತರ ವೈರಸ್ ಪತ್ತೆಯಾಗಿದೆ. 199 ಜನ ಪತ್ತೆಯಾಗಿರಲಿಲ್ಲ, ಅದರಲ್ಲಿ 80 ಮಂದಿ ನಮ್ಮ ದೇಶದವರಲ್ಲ, ಹೀಗಾಗಿ ಅವರ ಮಾಹಿತಿ ಇರಲಿಲ್ಲ, ನಮ್ಮವರನ್ನು ಪತ್ತೆ ಹಚ್ಚಿದ್ದೇವೆ, ಇನ್ನು ಉಳಿದವರನ್ನು ಶೀಘ್ರದಲ್ಲೆ ಪತ್ತೆ ಹಚ್ಚುತ್ತಾರೆ. ರೂಪಾಂತರ ವೈರಸ್ ಕಂಡುಬಂದ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡುತ್ತೇವೆ ಎಂದರು.
ಇದನ್ನೂ ಓದಿ:ರೂಪಾಂತರ ಕೊರೊನಾ ಹಿನ್ನೆಲೆ : ನಾಪತ್ತೆ ಆಗಿದ್ದವರ ವಿಳಾಸ ಕೊನೆಗೂ ಪತ್ತೆ!
ಹೊಸ ವರ್ಷದ ಆಚರಣೆಗೆ ಯುವಕರು, ಯುವತಿಯರು ತಯಾರಾಗಿದ್ದಾರೆ. ಆದರೆ ಈಗ ಸಂಭ್ರಮಪಡುವ ಸಂದರ್ಭ ಇಲ್ಲ. ಈ ಬಾರಿ ಹೊಸ ವರ್ಷ ಆಚರಣೆ ಬಹಿಷ್ಕಾರ ಮಾಡಿ ಅಥವಾ ಸರಳವಾಗಿ ತಮ್ಮ ಮನೆಯಲ್ಲೆ ಆಚರಣೆ ಮಾಡಿ, ಹೆಚ್ಚು ಜನ ಸೇರಬೇಡಿ. ಕೋವಿಡ್ ಕಡಿಮೆಯಾಗಿದೆ ಎಂದು ಈಗಾಗಲೇ ಕೆಲವರು ತಿಳಿದಿದ್ದಾರೆ. ಆದರೆ ಆ ನಿರ್ಲಕ್ಷ್ಯತೆ ಬೇಡ. ಲಸಿಕೆ ಬರುವರೆಗೂ ಮುಂಜಾಗ್ರತೆ ವಹಿಸಿ ಎಂದರು.