ಬೆಂಗಳೂರು: ಕೀಟಬಾಧೆಯಿಂದ ನಶಿಸಿ ಹೋದ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಳಿ ಅಲಸಂದೆ ಸಿ-152ರ ತಳಿಯನ್ನು ಹೋಲುವ “ಅಲಸಂದೆ ಕೆಬಿಸಿ-12’ನ್ನು ಜಿಕೆವಿಕೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ನವೆಂಬರ್ ತಿಂಗ ಳ ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.
Advertisement
ಮಾಡ್ರನ್ ಅಸಿಸ್ಟೆಡ್ ಬ್ಯಾಕ್‌ಕ್ರಾಸ್ ಬ್ರಿಡಿಂಗ್ ಅಡ್ವಾನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿ, ಎರಡು ವಿವಿಧ ಅಲಸಂದೆ ತಳಿಗಳಿಂದ ರೋಗನಿರೋಧಕಶಕ್ತಿಯನ್ನು ತೆಗೆದು ಹೊಸ ತಳಿಯಾದ ಅಲಸಂದೆ ಕೆಬಿಸಿ 12ನ್ನು ಅಭಿವೃದ್ಧಿ ಪಡಿಸಲಾಗಿದೆ. ಸತತ 10 ವರ್ಷಗಳ ಸಂಶೋಧನೆ ಮಾಡಿ ಅಭಿವೃದ್ಧಿ ಪಡಿಸಿದ ತಳಿ ಈಗಾಗಲೇ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಗೆ ಒಪಡಿಸಿದ್ದು, ಉತ್ತಮ ಇಳುವರಿ ಕೊಡುತ್ತಿರುವುದರಿಂದ ರೈತರಿಗೆ ಪರಿಚಯಿಸಲು ಮುಂದಾಗಿದೆ.
ಜತೆಗೆ ಸಿ-152 ತಳಿಗೆ ಬೇಡಿಕೆಯಿದ್ದರೂ, ಕೀಟಾ ಭಾದೆಯಿಂದ ರೈತರು ಈ ಬೆಳೆ ಬೆಳೆಯಲು ಮುಂದಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲಸಂದೆ ಕೆಬಿಸಿ-12 ತಳಿಯನ್ನು ಸಂಶೋಧನೆ ಮಾಡಲಾಗಿದೆ. ಇದು ದುಂಡಾಣು ಎಲೆ ಅಂಗಮಾರಿ, ನಂಜಾಣು, ಒಣಬೇರು ಕೊಳೆ ರೋಗದ ವಿರುದ್ಧ ಹೋರಾಡುವ ಪ್ರತಿರೋಧಕತೆಯನ್ನು ಹೊಂದಿದೆ. ಹೆಚ್ಚು ಇಳುವರಿ-ಕಡಿಮೆ ಅವಧಿ: ಅಲಸಂದೆ ಕೆಸಿಬಿ ತಳಿ 12ಯು ನಾಟಿ ಮಾಡಿದ 83 ದಿನಗಳಿಗೆ ಕಟಾವಿಗೆ ಬರಲಿದೆ. ಸುಮಾರು
54.07ಸೆ.ಮೀ. ಎತ್ತರ ಬೆಳೆಯುವ ಈ ತಳಿಯು ಎಕರೆಗೆ ಸುಮಾರು 13 ರಿಂದ 14ಕ್ವಿಂಟಾಲ್ ಇಳುವರಿ ಕೊಡಲಿದೆ. ಇದರ ಕಾಳು ತಿಳಿಯಾದ ಕಂದು ಬಣ್ಣದಿಂದ ಕೂಡಿದ್ದು, ನೋಡಲು ಅಕರ್ಷಕವಾಗಿರಲಿದೆ. ಇನ್ನೂ ಅಲಸಂದೆ ಕೆಸಿಬಿ-9 ನಾಟಿ ಮಾಡಿದ 93 ದಿನಗಳಿಗೆ ಕಟಾವಿಗೆ ಬಂದರೆ, ಒಂದು ಎಕರೆಗೆ 11 ರಿಂದ 12 ಕ್ವಿಂಟಾಲ್ ಇಳುವರಿ ನೀಡಲಿದೆ. ಇದರೊಂದಿಗೆ ಇದರಲ್ಲಿ ರೋಗನಿರೋಧಕದ ಕ್ಷಮತೆ ಕೆಸಿಬಿ12ಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಇದೆ.
Related Articles
ಹೊಸ ಅಲಸಂದೆ ತಳಿ ಕೆಬಿಸಿ 12 ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಸೂಕ್ತವಾಗಿದೆ. ಇದುವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲಸಂದೆ ಕೆಬಿಸಿ 12 ತಳಿಯನ್ನು ಬೆಳೆಸಿದ್ದು, ಉತ್ತಮ ಇಳುವರಿ ಬಂದಿದೆ. ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ,ಕೊಡಗು, ಶಿವಮೊಗ್ಗ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಹೊಸ ತಳಿ ಬೆಳೆಸಲು ಸೂಕ್ತವಾದ ಸ್ಥಳವಾಗಿದೆ.
Advertisement
ಅಲಸಂದೆ ತಳಿ ಕೆಬಿಸಿ-12 ಜುಲೈ-ಸೆಪ್ಟೆಂಬರ್ ಹಾಗೂ ಜನವರಿ-ಫೆಬ್ರವರಿ ಮಧ್ಯದಲ್ಲಿ ನಾಟಿ ಮಾಡಲು ಸೂಕ್ತ ಅವಧಿಯಾಗಿದೆ. ಅಲಸಂದೆಗಳನ್ನು ಬಹುವಾಗಿ ಕಾಡುವ ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದರ ಜತೆಗೆ ಉತ್ತಮ ಇಳುವರಿಯನ್ನು ಸಹ ನೀಡಲಿದೆ.●ಡಾ.ಎಚ್.ಸಿ. ಲೋಹಿತಾಶ್ವ, ಹಿರಿಯ ವಿಜ್ಞಾನಿ, ಜಿಕೆವಿಕೆ ■ ತೃಪ್ತಿ ಕುಮ್ರಗೋಡು