Advertisement

ಕುಷ್ಟಗಿಯ ಇಂದಿರಾ ಕ್ಯಾಂಟೀನ್‌ಗೆ ಮರುಜೀವ-ಕಡಿಮೆ ದರದಲ್ಲಿ ಊಟ-ಉಪಾಹಾರ

06:29 PM Jul 04, 2023 | Team Udayavani |

ಕುಷ್ಟಗಿ: ಜನಮಾನಸದಿಂದ ಮರೆತು ಹೋಗಿದ್ದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿದ್ದರಿಂದ ಮರುಜೀವ ಸಿಕ್ಕಿದೆ.

Advertisement

ಬಡವರ, ಕೂಲಿಕಾರರ, ವಿದ್ಯಾರ್ಥಿಗಳ ಹಸಿವು ನೀಗಿಸುವ ಸದುದ್ದೇಶದಿಂದ ಕಡಿಮೆ ದರದಲ್ಲಿ ಉಪಾಹಾರ, ಊಟ ಒದಗಿಸಲು ಕೊಪ್ಪಳ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತಲಾ 1ರಂತೆ 5 ಕ್ಯಾಂಟೀನ್‌ಗಳು ಮಂಜೂರಾಗಿದ್ದವು. ಕೊಪ್ಪಳ, ಗಂಗಾವತಿ, ಯಲಬುರ್ಗಾ ಹೊರತು ಪಡಿಸಿದರೆ ಕುಷ್ಟಗಿಯಲ್ಲಿ ಸೂಕ್ತ ಜಾಗೆ ಸಿಗದೇ ಇರುವುದಕ್ಕೆ ಇಂದಿರಾ ಕ್ಯಾಂಟೀನ್‌ ಇನ್ನೂ ಕನಸಾಗಿಯೇ
ಉಳಿದಿದೆ.

ಕಾಂಗ್ರೆಸ್‌ ಸರ್ಕಾರದ ಮಹಾತ್ವಾಕಾಂಕ್ಷೆಯ ಈ ಯೋಜನೆ 2017ರಲ್ಲಿ ಮಂಜೂರಾಗಿದ್ದ ಸಂದರ್ಭದಲ್ಲಿ ಆಗಿನ ಬಿಜೆಪಿ ಶಾಸಕ
ದೊಡ್ಡನಗೌಡ ಪಾಟೀಲ ಇದ್ದರು. 2018ರಲ್ಲಿ ಅಮರೇಗೌಡ ಪಾಟೀಲ ಬಯ್ನಾಪೂರ ಶಾಸಕರಾದ ಬಳಿಕ ಬಸ್‌ ನಿಲ್ದಾಣ
ಆವರಣ, ಜೆಸ್ಕಾಂ ಎಇಇ ಕಚೇರಿ ಆವರಣ, ಎಪಿಎಂಸಿಯಲ್ಲಿ ಪರಿಶೀಲನೆ ನಡೆಸಿದಾಗಲೂ ಅಂತಿಮವಾಗಿರಲಿಲ್ಲ. ನಂತರ ಕುಷ್ಟಗಿ-ಕೊಪ್ಪಳ ರಸ್ತೆಯ ಕಾರ್ಗಿಲ್‌ ಮಲ್ಲಯ್ಯ ವೃತ್ತದ ಎದುರಿನ ಬಸ್‌ ಡೀಪೋದ 60/40 ಅಡಿ ಜಾಗೆಯಲ್ಲಿ ನಿರ್ಮಿಸುವುದು ಅಂತಿಮಗೊಳಿಸಲಾಗಿತ್ತು. ಇನ್ನೇನು ಇಂದಿರಾ ಕ್ಯಾಂಟೀನ್‌ ನಿರ್ಮಿಸಬೇಕು ಎನ್ನುವಷ್ಟರಲ್ಲಿ ಸದರಿ ಕ್ಯಾಂಟಿನ್‌ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ ಕೈಕೊಟ್ಟಿರುವುದು ಕಾಕತಾಳಿಯವೆಂಬಂತೆ ಇಂದಿರಾ ಕ್ಯಾಂಟೀನ್‌ ಕನಸಾಗಿಯೇ ಉಳಿಯಿತು.

ಈಗ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ ಪುನಾರಂಭಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಕುಷ್ಟಗಿಯಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ ಕಾಯ್ದಿರಿಸಿದ ಜಾಗೆದಲ್ಲೇ ತಲೆ ಎತ್ತುವ ಆಶಾಭಾವ ಗರಿಗೆದರಿದೆ.

ಇಂದಿರಾ ಕ್ಯಾಂಟೀನ್‌ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಜಾಗದಲ್ಲಿ ನಿರ್ಮಿಸಲು ಅನುಮತಿ ಸಿಕ್ಕಿದ್ದು, ನಿಗಮದ ಅಧಿಕಾರಿಗಳು ಸದರಿ ಜಾಗವನ್ನು ಪುರಸಭೆಗೆ ಹಸ್ತಾಂತರಿಸಿದ ಕೂಡಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕೆಲಸ ಕೈಗೆತ್ತಿಕ್ಕೊಳ್ಳಲಾಗುವುದು.
ಧರಣೇಂದ್ರಕುಮಾರ, ಮುಖ್ಯಾಧಿಕಾರಿ, ಪುರಸಭೆ ಕುಷ್ಟಗಿ.

Advertisement

ಬಡ ಕೂಲಿಕಾರರು, ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್‌ ಅವಶ್ಯಕತೆ ಬಹಳ ಇದೆ. ಮಂಜೂರಾಗಿರುವ ಇಂದಿರಾ ಕ್ಯಾಂಟೀನ್‌ಗೆ ಜಾಗ ಕಾಯ್ದಿರಿಸಲಾಗಿದೆ ಎಂದು ಹೇಳಲಾಗುತ್ತಿದೆ ಹೊರತು ಕ್ಯಾಂಟೀನ್‌ ನಿರ್ಮಿಸಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದು ಇಂದಿರಾ ಕ್ಯಾಂಟೀನ್‌ ಆರಂಭಿಸುವ ವಿಶ್ವಾಸ ಮೂಡಿಸಿದೆ.
ಆರ್‌.ಕೆ. ದೇಸಾಯಿ,
ಅಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಕೂಲಿಕಾರರ ಸಂಘ ಕುಷ್ಟಗಿ

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next