Advertisement

ಹಳೆ ಪ್ರಸ್ತಾವನೆಗೆ ಮರುಜೀವ; ಕುದ್ರುಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ

11:09 PM Nov 02, 2020 | mahesh |

ಮಹಾನಗರ: ಮಂಗಳೂರು ಸುತ್ತ ಮುತ್ತ ಇರುವ ಕುದ್ರುಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿ ವೃದ್ಧಿ ಪಡಿಸುವ ಪ್ರಸ್ತಾವನೆ ಮರುಜೀವ ಪಡೆದುಕೊಂಡಿದೆ. ಈ ಸಂಬಂಧ ಸಮೀಕ್ಷೆ ನಡೆಸಿ ಯೋಜನೆ ಸಿದ್ಧಪಡಿಸುವ ಕುರಿತಂತೆ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿವೆ.

Advertisement

ಆ ಪ್ರಕಾರ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡವು ಕುದ್ರುಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದು, ಪೂರಕವಾಗಿ ಕಾರ್ಯಯೋಜನೆಗಳನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ನಗರದ ಇಕ್ಕೆಲಗಳಲ್ಲಿ ಹರಿಯುತ್ತಿರುವ ನೇತ್ರಾವತಿ, ಫಲ್ಗುಣಿ ನದಿಗಳ ಮಧ್ಯೆ ಸುಂದರ ಕುದ್ರುಗಳಿದ್ದು, ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ, ಹಳೆ ಬಂದರು ಬಳಿಯ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರು ಬೀಚ್‌ ಬಳಿ ಕುಡ್ಲಕುದುರು ಸಹಿತ ಮಂಗಳೂರು ಸುತ್ತಮುತ್ತಲೂ ಆರುಕುದ್ರುಗಳಿವೆ.

ಮೆರಿಟೈಮ್‌ ಬೋರ್ಡ್‌ನಲ್ಲಿ ಸಾಗರ ತೀರಗಳ ಅಭಿವೃದ್ಧಿಗೆ ಅವಕಾಶ ಗಳಿವೆ. ಬೋರ್ಡ್‌ನಲ್ಲಿ ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸದಸ್ಯ ರಾಗಿರುತ್ತಾರೆ. ಈ ಅವಕಾಶಗಳನ್ನು ಬಳಸಿಕೊಂಡು ಮಂಗಳೂರು ಸಮುದ್ರ ತೀರ ಪ್ರದೇಶಗಳನ್ನು, ಕುದ್ರುಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯನ್ನು ನಡೆಸಲಾಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಾಟರ್‌ಫ್ರಂಟ್‌ ಪ್ರದೇಶಗಳನ್ನು ಅಭಿ ವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಸ್ಮಾರ್ಟ್‌ಸಿಟಿ ಯೋಜನೆಯ ಸಹ ಯೋಗವನ್ನು ಪಡೆದುಕೊಂಡು ರಿಂಗ್‌ ರೋಡ್‌ ನಿರ್ಮಾಣ ಯೋಜನೆ ಪ್ರಸ್ತಾವನೆ ಮುಂದಿಟ್ಟಿದೆ. ಇದರ ಜತೆಗೆ ಕುದ್ರುಗಳ ಅಭಿವೃದ್ಧಿ ಸಾಕಾರಗೊಂಡರೆ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಲಭಿಸಲಿದೆ.

ಹಿನ್ನೀರು ಪ್ರವಾಸೋದ್ಯಮದಲ್ಲಿ ಯಶಸ್ಸು ಕಂಡಿರುವ ಕೇರಳದಲ್ಲಿ ವೈಪಿನ್‌ ದ್ವೀಪ, ಗುಂಡು ದ್ವೀಪ, ವಿಲಿಂಗ್ಟನ್‌ ದ್ವೀಪ, ಬೊಲ್ಗಟ್‌ ದ್ವೀಪ, ಧರ್ಮಾದಂ ಐಲ್ಯಾಂಡ್‌, ಕವ್ವಯಿ ದ್ವೀಪ, ಕಕ್ಯತುರ್ತು ದ್ವೀಪ, ಪೂವರ್‌ ದ್ವೀಪ, ಪೊನ್ನುಂತುರುತು ದ್ವೀಪ, ಮುನ್ರೊ ç ದ್ವೀಪ ಸಹಿತ ಸುಮಾರು 8 ಸಣ್ಣ ದ್ವೀಪಗಳು ಈಗಾಗಲೇ ಪ್ರವಾ ಸೋದ್ಯಮ ಕೇಂದ್ರಗಳಾಗಿವೆ.

ಹಲವು ವರ್ಷಗಳ ಪ್ರಸ್ತಾವನೆ
ಕೇಂದ್ರ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಮಂಗಳೂರು ಅಸುಪಾಸಿನ ಕುದ್ರುಗಳನ್ನು ಅಭಿವೃದ್ಧಿ ಪಡಿಸುವ ಚಿಂತನೆ ಕೆಲವು ವರ್ಷಗಳ ಹಿಂದೆಯೇ ನಡೆಸಲಾಗಿತ್ತು. ಜಪ್ಪಿನಮೊಗರಿನ ನೇತ್ರಾವತಿ ನದಿ, ಮಂಗಳೂರಿನ ಹಳೆ ಬಂದರು ಪ್ರದೇಶಗಳಲ್ಲಿ ಮೂರು ದ್ವೀಪಗಳಿವೆ. ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಅನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ನಡೆಸಿತ್ತು. ಇದಕ್ಕೆ ಪೂರಕವಾಗಿ ದ್ವೀಪಕ್ಕೆ ಬೋಟು ಸಂಚರಿಸುವುದಕ್ಕೂ ಹಿಂದೆ ಚಾಲನೆ ನೀಡಲಾಗಿತ್ತು. ಇದೇ ರೀತಿ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ನೇತ್ರಾವತಿ, ಫಲ್ಗುಣಿ ನದಿಯಲ್ಲಿನ ಮೂರು ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಚಿಂತನೆಗಳು ನಡೆದಿದ್ದವು. ಮುಂದೆ ಈ ನಿಟ್ಟಿನಲ್ಲಿ ಪೂರಕ ಪ್ರಕ್ರಿಯೆಗಳು ನಡೆಯಲಿಲ್ಲ. ಕುಡ್ಲ ಕುದ್ರುವಿನಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆಚ್ಚು ಯಶಸ್ಸು ಕಂಡಿಲ್ಲ.

Advertisement

ಪ್ರಕ್ರಿಯೆಗಳು ಆರಂಭಗೊಂಡಿವೆ
ಮಂಗಳೂರು ಸುತ್ತಮುತ್ತಲಿರುವ ಕುದ್ರುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರಗಳಾಗಿ ರೂಪಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳ ಜತೆ ಕುದ್ರುಗಳ ಪರಿಶೀಲನೆ ನಡೆಸಿದ್ದೇನೆ. ಕುದ್ರುಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಒಂದು ವಿಸ್ತೃತ ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರಲ್ಲಿ ಮೆರಿಟೈಮ್‌ ಬೋರ್ಡ್‌ನ ಸಹಯೋಗವನ್ನು ಪಡೆದುಕೊಳ್ಳುವ ಬಗ್ಗೆಯೂ ಚಿಂತಿಸಲಾಗಿದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next