Advertisement

ಅ.15ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ

12:58 AM Sep 17, 2019 | Team Udayavani |

ಬೆಂಗಳೂರು: ನಗರದಲ್ಲಿ ಸೆ.1ರಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಅ.15ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಮಾಡಿಕೊಳ್ಳಬಹುದು ಎಂದು ಬೆಂಗಳೂರು ನಗರ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

Advertisement

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗ ಸೆ.1ರಿಂದ ಅ.15ರವರೆಗೆ ರಾಜ್ಯದಲ್ಲಿ 2020ನೇ ಸಾಲಿನ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಹಮ್ಮಿಕೊಂಡಿದೆ.

ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಸವಿರುವ, ಫೆ.1ರ 2002ರಿಂದ ಜ.1ರ2003ರ ಅವಧಿ ನಡುವೆ ಜನಿಸಿರುವವರು (18 ವರ್ಷ ತುಂಬಿರುವವರು) ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ವಿಳಾಸ ಬದಲಾವಣೆ, ಮತದಾರ ಪಟ್ಟಿಯಿಂದ ಹೆಸರು ಕೈಬಿಡುವುದು, ವಯಸ್ಸು, ಜನ್ಮದಿನಾಂಕ, ಭಾವಚಿತ್ರ, ಅಕ್ಷರ ದೋಷ ಹಾಗೂ ಮತಗಟ್ಟೆಗಳ ಬದಲಾವಣೆಗೂ ಅವಕಾಶ ನೀಡಲಾಗಿದೆ.

ಕುಟುಂಬದ ಸದಸ್ಯರ ಹೆಸರು ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಇದ್ದರೆ ಒಂದೇ ಮತಗಟ್ಟೆಗೆ ಎಲ್ಲ ಸದಸ್ಯರ ಹೆಸರು ಸೇರಿಸುವುದಕ್ಕೂ ಅವಕಾಶವಿದೆ. ಅರ್ಜಿ ಸ್ವೀಕರಿಸಿದ ಬಳಿಕ ಅ.16ರಿಂದ ಚುನಾವಣಾಧಿಕಾರಿಗಳು ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಹಾಲಿ ಇರುವ ಮತದಾರರು: ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿದ್ದು, 91,00,207 ಮತದಾರರಿದ್ದಾರೆ. ಅದರಲ್ಲಿ 47,42,091 ಪುರುಷರು, 43,56,561 ಮಹಿಳೆಯರು, 1,555 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಈ ಬಾರಿಯೂ ಯುವ ಮತದಾರರ ನೋಂದಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶೇ.3ರಷ್ಟು ಯುವ ಮತದಾರರು ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Advertisement

ವಿಶೇಷ ಚೇತನರಿಗೆ ಪ್ರತ್ಯೇಕ ಏಜೆಂಟ್‌: ವಿಶೇಷ ಚೇತನ ಮತದಾರರಿಗಾಗಿ ಜಿಲ್ಲಾ ವಿಶೇಷ ಚೇತನ ಕಲ್ಯಾಣಾಧಿಕಾರಿ ಕಚೇರಿಯ ಮೂಲಕ ಪ್ರತ್ಯೇಕ ಏಜೆಂಟ್‌ ನೇಮಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ವಿಶೇಷ ಚೇತನರ ಮೊಬೈಲ್‌ ಸಂಖ್ಯೆ ಮತ್ತು ವಿಳಾಸ ಪಡೆದು ಅವರಿಗೆ ಕರೆಮಾಡಿ ಮತದಾರ ಪಟ್ಟಿಯಲ್ಲಿರುವ ಮಾಹಿತಿ ನೀಡಲಾಗುವುದು. ಅರ್ಹರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಯ ವಿವರ ನೀಡಲಾಗುವುದು ಎಂದು ಹೇಳಿದರು.

ಪಟ್ಟಿ ಸೇರ್ಪಡೆಗೆ ಅಗತ್ಯವಿರುವ ದಾಖಲೆ: ಮತದಾರರು ಪಟ್ಟಿಗೆ ಸೇರ್ಪಡೆಯಾಗಲು ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಆಧಾರ್‌, ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ ಬುಕ್‌, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ನಮೂದಿಸಿರುವ ಇತರ ಅಧಿಕೃತ ದಾಖಲೆಗಳನ್ನು ಒದಗಿಸಬೇಕು. ಗೊಂದಲಗಳಿದ್ದಲ್ಲಿ ಮತದಾರರ ಸಹಾಯವಾಣಿ “1950’ಕ್ಕೆ ಕರೆ ಮಾಡಬಹುದು.

ಪರಿಷ್ಕರಣೆ ಎಲ್ಲಿ ಮಾಡಬಹುದು: ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌, ಅಟಲ್‌ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯಿತಿ), ಮತಗಟ್ಟೆ ಅಧಿಕಾರಿ ಕಚೇರಿಯಲ್ಲಿ ಮತದಾರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ ಮೂಲಕವೂ ಪರಿಷ್ಕರಣೆಗೆ ಅರ್ಜಿಸಲ್ಲಿಸಬಹುದು. ಮತದಾರರ ಸಹಾಯವಾಣಿ ಮೊಬೈಲ್‌ ಆ್ಯಪ್‌, ಎನ್‌ವಿಎಸ್‌ಪಿ ಫೋರ್ಟಲ್‌ (//www.nvsp.in) ಹಾಗೂ ಸಹಾಯವಾಣಿ “1950′, ಮೂಲಕವೂ ಪರಿಷ್ಕರಣೆ ಮಾಡಿಕೊಳ್ಳಬಹುದಾಗಿದೆ.

15ದಿನದಲ್ಲಿ 15 ಸಾವಿರ ಅರ್ಜಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆ.1ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು, ಇದುವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು 15 ಸಾವಿರ ಅರ್ಜಿಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next