ಬೆಂಗಳೂರು: ಬಿಎಂಟಿಸಿಯು ಹವಾನಿಯಂತ್ರಿತ ಸೇವೆಗಳ ಪ್ರಯಾಣ ದರವನ್ನು ಶೇ.37ರಷ್ಟು ಕಡಿತಗೊಳಿಸಿದ್ದು, ಈ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಕೊಡುಗೆ ನೀಡಿದೆ. ವಜ್ರ ಮತ್ತು ವಾಯುವಜ್ರ ಬಸ್‌ಗಳ ಪ್ರಯಾಣ ದರ ಶೇ.37ರಷ್ಟು ಕಡಿಮೆ ಮಾಡಿದ್ದು, ಪರಿಷ್ಕೃತ ದರ ಜ.1ರಿಂದ ಜಾರಿಗೆ ಬರಲಿದೆ.
ಆದರೆ, ಈ ರಿಯಾಯ್ತಿ ತಾತ್ಕಾಲಿಕವಾಗಿರುತ್ತದೆ. ಅಂದರೆ ಜನವರಿ ಒಂದು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ಇದನ್ನು ಪರಿಚಯಿಸಲಾಗಿದೆ. ಉತ್ತಮ ಪ್ರತಿಕ್ರಿಯೆ ದೊರೆತರೆ ಮಾತ್ರ ಈ ಪರಿಷ್ಕೃತ ದರ ಮುಂದುವರಿಯಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುಮಾರು 825 ವಜ್ರ ಮತ್ತು ವಾಯುವಜ್ರ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ ಈ ಬಸ್‌ಗಳಲ್ಲಿ 20ರಿಂದ 22 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರಿಗೂ ಈ ದರ ಪರಿಷ್ಕರಣೆ ಲಾಭ ದೊರೆಯಲಿದೆ.
ಇದಲ್ಲದೆ, ವಾಯುವಜ್ರ ಸೇವೆಯಲ್ಲಿ ಗುಂಪು ರಿಯಾಯ್ತಿ ಕೂಡ ಪರಿಚಯಿಸಲಾಗಿದೆ. 3 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಂದೇ ಗುಂಪಿನಿಂದ ಸಂಚರಿಸಿದರೆ, ಪ್ರಯಾಣ ದರದಲ್ಲಿ ಶೇ. 15ರಷ್ಟು ಗುಂಪು ರಿಯಾಯ್ತಿ ನೀಡಲಾಗುವುದು.
ಸದ್ಯಕ್ಕೆ ಪಿಒಎಸ್ ಯಂತ್ರ (ಸ್ಮಾರ್ಟ್ ಕಾರ್ಡ್‌ದಾರರು) ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಮಾತ್ರ ಈ ರಿಯಾಯ್ತಿ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವಾಯುವಜ್ರ ಸೇವೆಗಳಲ್ಲೂ ಇದನ್ನು ವಿಸ್ತರಿಸಲಾಗುವುದು. ಈ ಸೌಲಭ್ಯ ಜಾರಿಗೊಳ್ಳಲಿರುವ ದಿನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
ಮೇಕ್ರಿ ವೃತ್ತ, ಹೆಬ್ಟಾಳ, ಎಸ್ಟೀಮ್ ಮಾಲ್, ಕೋಗಿಲು ಕ್ರಾಸ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ಕ್ಕೆ ವಾಯುವಜ್ರ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇವುಗಳ ದರ ವಿವರ ಹೀಗಿದೆ.
ಮಾರ್ಗ ಪ್ರಸ್ತುತ ದರ ಪರಿಷ್ಕೃತ ದರ (ರೂ.ಗಳಲ್ಲಿ)
-ಮೇಕ್ರಿ ವೃತ್ತ-ಕೆಐಎಎಲ್ 190 175
-ಹೆಬ್ಟಾಳ-ಕೆಐಎಎಲ್ 170 150
-ಎಸ್ಟೀಮ್ ಮಾಲ್-ಕೆಐಎಎಲ್ 170 140
-ಕೋಗಿಲು ಕ್ರಾಸ್-ಕೆಐಎಎಲ್ 170 125
ಜಿಎಸ್‌ಟಿ ಶೇ.5 ಹಾಗೂ ಟೋಲ್ (12 ರೂ. ಪ್ರತಿ ಪ್ರಯಾಣಿಕರಿಗೆ) ಹೊರತುಪಡಿಸಿ